
ಚನ್ನೈ, ಮೇ ೫- ತಮಿಳುನಾಡಿನಲ್ಲಿ ಹೊಸ ಜನನಾಯಕ ನಟ ವಿಜಯ್ ರವರ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ತಮಿಳುನಾಡಿನಲ್ಲಿ ನಟ ವಿಜಯ್ ರವರ ಆಡಳಿತ ಶೆಖೆ ಆರಂಭವಾಗಲಿದೆ.
ಸರ್ಕಾರ ರಚನೆಗೆ ಟಿವಿಕೆ ಮುಖ್ಯಸ್ಥ ವಿಜಯ್ ಹಕ್ಕು ಮಂಡಿಸಿದ್ದು, ಬಹುಮತ ಸಾಬೀತಿಗೆ ೨ ವಾರಗಳ ಕಾಲಾವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ೧೦೮ ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಟಿವಿಕೆ ಸಹಜವಾಗಿಯೇ ಸರ್ಕಾರ ರಚನೆಯ ಅವಕಾಶ ಪಡೆಯಲಿದ್ದು, ಈ ಸಂಬಂಧ ನಟ ವಿಜಯ್ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ರವರಿಗೆ ಇ-ಮೇಲ್ ಮೂಲಕ ಪತ್ರ ರವಾನಿಸಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ.
ಬಹುಮತ ಸಾಬೀತಿಗೆ ಎರಡು ವಾರಗಳ ಕಾಲಾವಕಾಶ ನೀಡುವಂತೆಯೂ ಪತ್ರದಲ್ಲಿ ಕೋರಿದ್ದಾರೆ. ಟಿವಿಕೆ ಪಕ್ಷ ಬಹುಮತಕ್ಕೆ ೧೧ ಸ್ಥಾನಗಳ ಕೊರತೆ ಹೊಂದಿದ್ದು, ಪಾಟಾಳ ಮಕ್ಕಳ ಕಚ್ಚಿ (ಪಿಎಂಕೆ), ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ಸ್ಥಳೀಯ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಲು ಟಿವಿಕೆ ಮುಂದಾಗಿದೆ.
ತಮಿಳುನಾಡಿನಲ್ಲಿ ಪಾಟಾಳ ಮಕ್ಕಳ ಕಚ್ಚಿ ಪಕ್ಷ ೫ ಸ್ಥಾನ, ಕಾಂಗ್ರೆಸ್ ೫, ಭಾರತೀಯ ಕಮ್ಯುನಿಸ್ಟ್ ಪಕ್ಷ ೨, ಸಿಪಿಎಂ ೨, ವಿಡುತಲೈ ಚಿರುತೈ ಕಚ್ಚಿ ಪಕ್ಷ ೨, ಡಿಎಂಡಿಕೆ, ಐಯುಎಂಎಲ್ ತಲಾ ೨ ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದು, ಒಟ್ಟಾರೆ ಈ ಎಲ್ಲಾ ಪಕ್ಷಗಳು ೧೯ ಸ್ಥಾನಗಳಲ್ಲಿ ಗೆದ್ದಿವೆ.
ಈ ಪಕ್ಷಗಳ ಜತೆ ಸೇರಿಕೊಂಡು ಬಹುಮತ ಗಳಿಸುವ ಲೆಕ್ಕಾಚಾರದಲ್ಲಿ ವಿಜಯ್ ಇದ್ದು, ಈ ಪಕ್ಷಗಳ ಬೆಂಬಲ ಪಡೆಯುವ ಸಂಬಂಧ ಈಗಾಗಲೇ ಮಾತುಕತೆಗಳು ನಡೆದಿವೆ.
ಸರ್ಕಾರ ರಚನೆಗೆ ತಮಿಳುನಾಡಿನಲ್ಲಿ ಈಗ ಸಂಖ್ಯಾ ಆಟ ಆರಂಭವಾಗಿದ್ದು, ನಟ ವಿಜಯ್ ಡಿಎಂಕೆ, ಎಐಡಿಎಂಕೆ, ಬಿಜೆಪಿಯನ್ನು ಹೊರತುಪಡಿಸಿ ಸ್ಥಳೀಯ ಸಣ್ಣಪುಟ್ಟ ಪಕ್ಷಗಳ ಜತೆಯೇ ಮೈತ್ರಿ ಮಾಡಿಕೊಂಡು, ಸರ್ಕಾರ ರಚಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ.
ಸರ್ಕಾರ ರಚನೆಯಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಪ್ರಮುಖ ಸ್ಥಾನ ವಹಿಸಲಿದ್ದು, ಕಾಂಗ್ರೆಸ್ ಯುವರಾಜ ರಾಹುಲ್‌ಗಾಂಧಿಯವರು ಟಿವಿಕೆ ನಾಯಕ ವಿಜಯ್ ರವರ ಗೆಲುವಿಗೆ ಅಭಿನಂದಿಸುವ ಮೂಲಕ ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಟಿವಿಕೆಗೆ ಬೆಂಬಲ ನೀಡುವ ಸುಳಿವು ನೀಡಿದ್ದಾರೆ.
ತಮಿಳುನಾಡಿನ ಚುನಾವಣೆಯ ಜನಾದೇಶವು ಯುವ ಜನರ ಧ್ವನಿಯನ್ನು ಬಿಂಬಿಸುತ್ತದೆ. ಅದನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ರಾಹುಲ್‌ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಟಿವಿಕೆಗೆ ಬೆಂಬಲ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಟಿವಿಕೆ ಪಕ್ಷ ಬಿಜೆಪಿಯ ಸಿದ್ಧಾಂತವನ್ನು ವಿರೋಧಿಸಿದ್ದು, ಚುನಾವಣಾ ರ್‍ಯಾಲಿಯಲ್ಲಿ ನಟ ವಿಜಯ್ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ಹಾಗಾಗಿ ಟಿವಿಕೆ ಬಿಜೆಪಿ, ಎಐಡಿಎಂಕೆ ಬಿಟ್ಟು ಉಳಿದ ಪಕ್ಷಗಳ ಜತೆ ಮೈತ್ರಿ ಸಾಧಿಸಿ ಅಧಿಕಾರದ ಗದ್ದುಗೆಗೇರಲು ಮುಂದಾಗಿದೆ.
ತಮಿಳುನಾಡಿನ ಚುನಾವಣೆಯಲ್ಲಿ ಸರಳ ಬಹುಮತ ಸಾಬೀತುಪಡಿಸಲು ಟಿವಿಕೆಗೆ ೧೦ ರಿಂದ ೧೧ ಶಾಸಕರ ಬೆಂಬಲ ಅಗತ್ಯ. ಸಣ್ಣಪುಟ್ಟ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡರೆ ಬಹುಮತ ಸಾಬೀತು ಸುಗಮವಾಗಲಿದೆ. ಈ ನಿಟ್ಟಿನಲ್ಲಿ ಸಣ್ಣಪುಟ್ಟ ಪಕ್ಷಗಳ ಮುಖ್ಯಸ್ಥರುಗಳ ಜತೆ ಟಿವಿಕೆ ಮಾತುಕತೆಯಲ್ಲಿ ತೊಡಗಿದ್ದು, ಸಂಜೆ ವೇಳೆಗೆ ಎಲ್ಲವೂ ನಿಚ್ಚಳವಾಗಲಿದೆ.
ತಮಿಳುನಾಡಿನಲ್ಲಿ ಹೊಸ ಜನನಾಯಕರಾಗಿರುವ ವಿಜಯ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೆ ಇರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ವಿಜಯ್ ಸರ್ಕಾರದ ದರ್ಬಾರು ಸದ್ಯದಲ್ಲೇ ಆರಂಭವಾಗಲಿದೆ.
ಟಿವಿಕೆ ಶಾಸಕರ ಸಭೆ
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಟಿವಿಕೆ ಪಕ್ಷದ ಎಲ್ಲಾ ಶಾಸಕರ ಜತೆ ನಟ ವಿಜಯ್ ಇಂದು ಸಭೆ ನಡೆಸಿದ್ದು, ಟಿವಿಕೆ ಪಕ್ಷದ ಮುಂದಿನ ಹಾದಿ, ಯಾವ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳಬೇಕು ಎಂಬೆಲ್ಲಾ ವಿಚಾರಗಳ ಬಗ್ಗೆ ಶಾಸಕರ ಜತೆ ಚರ್ಚಿಸುವರು.
ಈ ಶಾಸಕರ ಸಭೆಯಲ್ಲಿ ಮುಂದಿನ ರಾಜಕೀಯ ನಿರ್ಧಾರಗಳನ್ನು ನಟ ವಿಜಯ್ ರವರಿಗೆ ಬಿಟ್ಟು ಕೊಡಲಾಗಿದ್ದು, ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧ ಎಂದು ಟಿವಿಕೆ ಶಾಸಕರು ಸಭೆಯಲ್ಲಿ ಹೇಳಿ, ಪಕ್ಷದ ಸರ್ವೋಚ್ಛ ನಾಯಕನ ತೀರ್ಪನ್ನು ಪಾಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿನ ಹಿತದೃಷ್ಟಿಯಿಂದ ಸ್ಥಳೀಯ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿ ಚುನಾವಣಾ ಸಂದರ್ಭದಲ್ಲಿ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸುವುದಾಗಿಯೂ ನಟ ವಿಜಯ್ ಶಾಸಕರ ಸಭೆಯಲ್ಲಿ ಹೇಳಿದರು ಎನ್ನಲಾಗಿದೆ.
“ಸರ್ಕಾರ್ ಟು ಸರ್ಕಾರ್”
ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಲಿರುವ ನಟ ವಿಜಯ್ ರಾಜಕೀಯಕ್ಕೆ ಬರಲು ೨೦೧೮ ರಿಂದಲೇ ಸಿದ್ಧತೆ ಆರಂಭಿಸಿದ್ದರು. ಅವರು ೨೦೨೪ ರಲ್ಲಿ ಪಕ್ಷ ಸ್ಥಾಪನೆ ಮಾಡಿದ್ದರು. ೨೦೨೧೮ ರ ನವೆಂಬರ್ ತಿಂಗಳಲ್ಲಿ ತೆರೆಕಂಡ ಸರ್ಕಾರ್ ಎಂಬ ಚಿತ್ರದ ಮೂಲಕ ವಿಜಯ್ ಅವರು ತಮಿಳುನಾಡಿನ ರಾಜಕೀಯ ಕಲ್ಪನೆಗೆ ಕಾಲಿಟ್ಟಿದ್ದರು.
ಈ ಸಿನಿಮಾದಲ್ಲಿ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು ಆಕಸ್ಮಿಕವಾಗಿ ಭಾರತಕ್ಕೆ ಬಂದು ಆ ಸಂದರ್ಭದಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸುತ್ತಾರೆ. ಅವರ ಹೆಸರಿನಲ್ಲಿ ಅಕ್ರಮವಾಗಿ ಮತ ಚಲಾವಣೆಯಾಗಿದ್ದರಿಂದ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುತ್ತಾರೆ.
ಚುನಾವಣಾ ವಂಚನೆ, ರಾಜಕೀಯ ಭ್ರಷ್ಟಾಚಾರ, ಮತದಾರರನ್ನು ಓಲೈಸುವ, ಅವರನ್ನು ಮೋಸ ಮಾಡುವ ವ್ಯವಸ್ಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿತ್ತು. ಅಂತಿಮವಾಗಿ ಸಿನಿಮಾದಲ್ಲಿ ವಿಜಯ್ ಅವರು ರಾಜಕೀಯ ಪ್ರವೇಶಿಸಿ ಅವರ ನೇತೃತ್ವದಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಈ ಸಿನಿಮಾ ತಮಿಳುನಾಡಿನಲ್ಲಿ ಭಾರೀ ಹಿಟ್ ಆಗಿತ್ತು.
ಈ ಸಿನಿಮಾ ಬಿಡುಗಡೆಯ ನಂತರ ನಟ ವಿಜಯ್ ತಮ್ಮದೇ ಪಕ್ಷ ಸ್ಥಾಪಿಸಿ, ಆ ಪಕ್ಷವನ್ನು ಅಧಿಕಾರದ ಹಂತಕ್ಕೆ ತಂದು ನಿಲ್ಲಿಸಿದ್ದು, “ಸರ್ಕಾರ್ ಟು ಸರ್ಕಾರ್” ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.
ಸರ್ಕಾರ್ ಸಿನಿಮಾ ಸಂದರ್ಭದಲ್ಲಿ ಆರಂಭವಾದ ವಿಜಯ್ ರವರ ರಾಜಕೀಯ ಸಿದ್ದತೆ ಈಗ ಅವರನ್ನು ತಮಿಳುನಾಡಿನ ಮುಖ್ಯಮಂತ್ರಿ ಗಾದಿಗೆ ತಂದು ನಿಲ್ಲಿಸಿದೆ.

























