
ಬೆಂಗಳೂರು, ಏ. ೨೯- ರಾಜ್ಯ ಕಾಂಗ್ರೆಸ್ನ ಅಧಿಕಾರ ಹಂಚಿಕೆಯ ಸಂಘರ್ಷ, ನಾಯಕರುಗಳ ಹೇಳಿಕೆಗಳು, ದೆಹಲಿ ಯಾತ್ರೆ ಇವುಗಳಿಂದ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಮುಂದಾಗಿದ್ದು, ಪಂಚರಾಜ್ಯಗಳ ಚುನಾವಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರುಗಳನ್ನು ದೆಹಲಿಗೆ ಕರೆಸಿಕೊಂಡು ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ.
ರಾಜ್ಯ ಕಾಂಗ್ರೆಸ್ನಲ್ಲಿನ ಗೊಂದಲಗಳ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ಕಾಂಗ್ರೆಸ್ನ ಯುವ ರಾಜ ರಾಹುಲ್ಗಾಂಧಿ ಅವರ ಗಮನಕ್ಕೆ ತಂದಿದ್ದು, ಆದಷ್ಟು ಬೇಗ ಅಧಿಕಾರ ಹಂಚಿಕೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಖರ್ಗೆ ಅವರು ರಾಹುಲ್ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ರಾಹುಲ್ಗಾಂಧಿ ರಾಜ್ಯ ಕಾಂಗ್ರೆಸ್ನ ಗೊಂದಲಗಳ ಪರಿಹಾರಕ್ಕೆ ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗಿದ್ದು, ಪಂಚರಾಜ್ಯಗಳ ಫಲಿತಾಂಶ ಪ್ರಕಟವಾದ ಬಳಿಕ ಮೇ ಎರಡನೇ ವಾರದಲ್ಲಿ ರಾಹುಲ್ಗಾಂಧಿ ಅವರು ಗೊಂದಲಗಳನ್ನು ನಿವಾರಿಸಲು ತನ್ನದೇ ಆದ ಪರಿಹಾರವನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ನ ಯುವ ರಾಜ ರಾಹುಲ್ಗಾಂಧಿ ರಾಜ್ಯ ಕಾಂಗ್ರೆಸ್ನ ಅಧಿಕಾರ ಹಂಚಿಕೆಯ ಜಟಾಪಟಿಗೆ ಪರಿಹಾರ ಪ್ರಕಟಿಸುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಲಿದ್ದು, ಈ ಇಬ್ಬರು ನಾಯಕರುಗಳ ಜತೆ ಚರ್ಚೆಯ ನಂತರವೇ ರಾಹುಲ್ಗಾಂಧಿ ಅವರು ರಾಜ್ಯ ಕಾಂಗ್ರೆಸ್ನ ಗೊಂದಲ ನಿವಾರಣೆಯ ನಿರ್ಧಾರವನ್ನು ಪ್ರಕಟಿಸುವರು ಎಂದು ಕಾಂಗ್ರೆಸ್ನ ಉನ್ನತ ಮೂಲಗಳು ಹೇಳಿವೆ.
ಅಧಿಕಾರ ಹಂಚಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ನಲ್ಲಿ ಶಾಸಕರುಗಳು, ಸಚಿವರುಗಳು ತಮ್ಮದೇ ಆದ ಡಿನ್ನರ್ ಮೀಟಿಂಗ್, ದೆಹಲಿ ಯಾತ್ರೆ ಇವುಗಳನ್ನು ನಡೆಸಿದ್ದು, ಇದರಿಂದ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆಯ ಸಂಘರ್ಷ ತಾರಕಕ್ಕೇರಿದೆ.
ಈ ಸಂಘರ್ಷವನ್ನು ನಿವಾರಿಸುವ ಒತ್ತಡದಲ್ಲಿ ಹೈಕಮಾಂಡ್ ಇದ್ದು ಮೇ ೨ನೇ ವಾರದಲ್ಲಿ ಎಲ್ಲದಕ್ಕೂ ಪರಿಹಾರ ಸಿಗಲಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಳೆದ ವಾರ ತಮ್ಮ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಜತೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಕಾಂಗ್ರೆಸ್ ಸರ್ಕಾರ ರಚನೆಯ ಸಂದರ್ಭದಲ್ಲಿ ಆದ ಒಪ್ಪಂದವನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದರು
ಬಳಿಕ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ಈ ಹಿಂದೆ ಆದ ಒಪ್ಪಂದಗಳು ಚಾಲ್ತಿಗೆ ಬರಲಿವೆ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆಯ ಸೂಚನೆ ನೀಡಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ನಿಂತಿರುವ ಸಚಿವರುಗಳಾದ ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ. ಮಹದೇವಪ್ಪ ರವರು ಕಳೆದ ಎರಡು ದಿನಗಳಿಂದ ದೆಹಲಿಯಲ್ಲೇ ಮೊಕ್ಕಾಂ ಹೂಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಜತೆ ಚರ್ಚೆ ನಡೆಸಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮುಂದುವರೆಯಬೇಕು ಎಂದು ಒತ್ತಾಯ ಹೇರಿದ್ದರು.
ಈ ನಡುವೆ ಸಚವ ಮುನಿಯಪ್ಪ ಅವರು ಸಹ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಗೊಂದಲ ನಿವಾರಣೆಗೆ ಮನವಿ ಮಾಡಿದ್ದರು. ಇದಕ್ಕೂ ಮೊದಲು ಕಳೆದ ೧೫ ದಿನಗಳ ಹಿಂದೆ ಕಾಂಗ್ರೆಸ್ನ ೨೦ ಕ್ಕೂ ಹೆಚ್ಚು ಹಿರಿಯ ಶಾಸಕರು ದೆಹಲಿ ಯಾತ್ರೆ ನಡೆಸಿ ನಾಲ್ಕೈದು ದಿನ ದೆಹಲಿಯಲ್ಲೇ ಉಳಿದು ಸಂಪುಟ ಪುನಾರಚನೆಗೆ ಆಗ್ರಹಿಸಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದರು.
ಈ ಎಲ್ಲ ಬೆಳವಣಿಗೆಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರುರು ರಾಹುಲ್ಗಾಂಧಿ ಅವರ ಗಮನಕ್ಕೆ ತಂದು ರಾಜ್ಯ ಕಾಂಗ್ರೆಸ್ನ ಗೊಂದಲ ನಿವಾರಣೆಗೆ ಆದಷ್ಟು ಬೇಗ ಒಂದು ನಿರ್ಧಾರ ಕೈಗೊಳ್ಳುವ ಅಗತ್ಯತ್ತೆಯನ್ನು ಮನವಿರಿಕೆ ಮಾಡಿಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಹುಲ್ಗಾಂಧಿ ಗೊಂದಲ ನಿವಾರಣೆಗೆ ಮನಸ್ಸು ಮಾಡಿದ್ದು, ಮೇ ೨ನೇ ವಾರದಲ್ಲಿ ಮುಖ್ಮಯಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವರು ಎಂದು ಹೇಳಲಾಗಿದೆ.
ಮೇ ೧೫ ರೊಳಗೆ ರಾಜ್ಯ ಕಾಂಗ್ರೆಸ್ನ ಗೊಂದಲಗಳಿಗೆ ಪರಿಹಾರ ಸಿಗುವ ನಿರೀಕ್ಷೆ ಇದ್ದು, ರಾಹುಲ್ಗಾಂಧಿ ಅವರು ಯಾವ ತೀರ್ಮಾನ ಕೈಗೊಳ್ಳುತ್ತ ಎಲ್ಲರ ಚಿತ್ತ ನೆಟ್ಟಿದೆ.
ಕಾಂಗ್ರೆಸ್ನ ಯುವರಾಜ ರಾಹುಲ್ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಂದುವರೆಸಿ ಇಲ್ಲವೆ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡುವ ಅಥವಾ ದಲಿತ ಸಿಎಂ ಕೂಗಿಗೆ ಸ್ಪಂದಿಸಿ, ದಲಿತ ಸಮುದಾಯದವನ್ನು ಮುಖ್ಯಮಂತ್ರಿ ಮಾಡುವರೇ ಎಂಬೆಲ್ಲಾ ಪ್ರಶ್ನೆಗಳಿಗೆ ಮೇ ೧೫ ರೊಳಗೆ ಉತ್ತರ ಸಿಗುವ ಸಾಧ್ಯತೆ ಹೆಚ್ಚಿದೆ.
ಹಾಗಾಗಿ ಎಲ್ಲರ ಕಣ್ಣ ಈಗ ಹೈಕಮಾಂಡ್ನತ್ತ ನೆಟ್ಟಿದೆ. ಹೈಕಮಾಂಡ್ನ ತೀರ್ಮಾನ ಏನಾಗಲಿದೆ ಎಂಬ ಕೂತುಹಲ ಉಂಟಾಗಿದೆ.
























