Home ಮುಖಪುಟ ಸುದ್ದಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮತ್ತೆ ನಂದಿನಿ ತುಪ್ಪದ ಘಮಲು

ತಿಮ್ಮಪ್ಪನ ಸನ್ನಿಧಿಯಲ್ಲಿ ಮತ್ತೆ ನಂದಿನಿ ತುಪ್ಪದ ಘಮಲು

೨೯ ಎ ೧ನಗರದ ಡೇರಿ ವೃತ್ತದಲ್ಲಿರುವ ಬೆಂಗಳೂರು ಡೇರಿ ಆವರಣದಲ್ಲಿಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ತಿರುಮಲ ತಿರುಪತಿ ದೇವಸ್ಥಾನಕ್ಕೆ ನಂದಿನಿ ತುಪ್ಪ ಸರಬರಾಜು ಮಾಡುವ ಕಾರ್ಯಕ್ರಮಕ್ಕೆ ಇಂದು ಒಕ್ಕೂಟದ ಅಧ್ಯಕ್ಷ ಮಾಜಿ ಸಂಸದ ಡಿ.ಕೆ. ಸುರೇಶ್‌ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.


ಬೆಂಗಳೂರು, ಏ. ೨೯- ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮತ್ತೆ ನಂದಿನಿ ತುಪ್ಪದ ಸುಗಂಧ ಹರಡಲಿದ್ದು, ತಿರುಪತಿ ಲಡ್ಡು ತಯಾರಿಕೆಗೆ ಕರ್ನಾಟಕದ ಹೆಮ್ಮೆಯ ‘ನಂದಿನಿ’ ತುಪ್ಪ ಮರುಪ್ರವೇಶ ಮಾಡಿದೆ.


ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಃಂಒUಐ) ವತಿಯಿಂದ ತಿರುಪತಿ ದೇವಸ್ಥಾನದ ಜೊತೆಗಿನ ಒಪ್ಪಂದಕ್ಕೆ ಮರುಜೀವ ಸಿಕ್ಕಿದ್ದು, ಒಟ್ಟು ಸುಮಾರು ೨೦ ಲಕ್ಷ ಕೆಜಿ ನಂದಿನಿ ತುಪ್ಪವನ್ನು ತಿರುಪತಿಗೆ ರವಾನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಡೇರಿ ಆವರಣದಲ್ಲಿ ಲಾರಿಗಳಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಲಾಯಿತು.


ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಮಾತನಾಡಿ, ನಂದಿನಿ ಬ್ರಾಂಡ್ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸ ಗಳಿಸಿದೆ. ಕಳೆದ ೩-೪ ವರ್ಷಗಳಿಂದ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡುತ್ತಿದ್ದೇವೆ. ಈ ಬಾರಿ ಬಮೂಲ್ ವತಿಯಿಂದ ಪ್ರತ್ಯೇಕವಾಗಿ ೬ ತಿಂಗಳ ಗುತ್ತಿಗೆ ಪಡೆದಿದ್ದೇವೆ.


ಸುಮಾರು ೧೩೬ ಕೋಟಿ ಮೌಲ್ಯದ ಟೆಂಡರ್ ಒಪ್ಪಿಕೊಂಡಿದ್ದು, ಪ್ರತಿದಿನ ಸುಮಾರು ೧೧ ಟನ್ ತುಪ್ಪ ಕಳುಹಿಸಲಾಗುತ್ತದೆ. ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಡಿಜಿಟಲ್ ಲಾಕರ್ ವ್ಯವಸ್ಥೆ ಮೂಲಕ ಸುರಕ್ಷಿತ ಸಾಗಣೆ ಮಾಡಲಾಗುತ್ತದೆ ಎಂದು ತಿಳಿಸಿದರು..ಇನ್ನೂ ಮಾರುಕಟ್ಟೆಯಲ್ಲಿ ಕಲಬೆರಿಕೆ ತುಪ್ಪ ಹೆಚ್ಚುತ್ತಿರುವ ಹಿನ್ನೆಲೆ, ನಂದಿನಿ ಹೆಸರಿನಲ್ಲಿ ನಕಲಿ ಉತ್ಪನ್ನ ಮಾರಾಟ ಮಾಡುವವರ ವಿರುದ್ಧ ದೂರು ದಾಖಲಿಸಲಾಗಿದೆ. ನಂದಿನಿ ಬ್ರ್ಯಾಂಡ್ ವಿಶ್ವಾಸಾರ್ಹತೆಯನ್ನು ಉಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಇದಲ್ಲದೆ, ಕೆಎಂಎಫ್ ದಿನಕ್ಕೆ ಒಂದು ಕೋಟಿಗೂ ಹೆಚ್ಚು ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಬಮೂಲ್‌ನಲ್ಲಿ ೧೭.೫ ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ೨೨-೨೩ ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.


ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ, ಒಂದು ಹಸುವಿಗೆ ೯೦ ಸಾವಿರ, ಎರಡು ಹಸುಗಳಿಗೆ ೨ ಲಕ್ಷವರೆಗೆ ಸಾಲ, ಮಿನಿ ಡೈರಿಗಳಿಗೆ ೧೫ ಲಕ್ಷವರೆಗೆ ಸಾಲವನ್ನು ೩% ಬಡ್ಡಿದರದಲ್ಲಿ ನೀಡುವ ಯೋಜನೆ ರೂಪಿಸಲಾಗಿದೆ. ಸುಮಾರು ೧೦ ಸಾವಿರ ಕುಟುಂಬಗಳಿಗೆ ಇದರ ಲಾಭ ನೀಡುವ ಗುರಿ ಹೊಂದಲಾಗಿದೆ.
ಇದೇ ವೇಳೆ, ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ೧೫೦ ನಂದಿನಿ ಪಾರ್ಲರ್ ತೆರೆಯುವ ಯೋಜನೆ ಕೂಡ ರೂಪಿಸಲಾಗಿದೆ.


ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಮರಳಿರುವುದು ಕನ್ನಡಿಗರಿಗೆ ಮತ್ತೊಂದು ಹೆಮ್ಮೆ ತಂದಿದ್ದು, ರಾಜ್ಯದ ಹಾಲು ಉತ್ಪಾದಕರಿಗೆ ಹೊಸ ಆತ್ಮವಿಶ್ವಾಸ ತುಂಬಿದೆ.