Home Uncategorized ನೀರಿನ ಕೊರತೆಯ ನಡುವೆಯೂ ಉತ್ತಮ ಕಲ್ಲಂಗಡಿ ಬೆಳೆ ಬೆಳೆದ ರೈತ ವಿಜಯ ಭಾಸ್ಕರ್ ರೆಡ್ಡಿ

ನೀರಿನ ಕೊರತೆಯ ನಡುವೆಯೂ ಉತ್ತಮ ಕಲ್ಲಂಗಡಿ ಬೆಳೆ ಬೆಳೆದ ರೈತ ವಿಜಯ ಭಾಸ್ಕರ್ ರೆಡ್ಡಿ

ಸಂಜೆವಾಣಿ ವಾರ್ತೆ

ಸಿರುಗುಪ್ಪ, ಏ.29: ಕೃಷಿಯಲ್ಲಿ ಮಣ್ಣು ನಂಬಿದರೆ ಹೊನ್ನು ಎಂಬಂತೆ ಜಮೀನಿನಲ್ಲಿ ಬೆವರು ಸುರಿಸಿ ದುಡಿದರೆ ಕಷ್ಟ ಹತ್ತಿರ ಸುಳಿಯುವುದಿಲ್ಲ ಎನ್ನುವ ಮಾತಿನಂತೆ ಕಲ್ಲಂಗಡಿ ಕೃಷಿಯಲ್ಲಿ ಸಿರಿ ಕಾಣಬಹುದು ಎಂಬುವುದಕ್ಕೆ ಯುವ ರೈತ ವಿಜಯ ಭಾಸ್ಕರ್ ರೆಡ್ಡಿ ಪ್ರೇರಣೆಯಾಗಿದ್ದಾರೆ.

ತಾಲೂಕಿನಲ್ಲಿ ಈ ಬಾರಿ ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆ ಬೆಳೆಯಲು ನೀರು ಬಿಡದಿದ್ದರು, ನೀರಿನ ಕೊರತೆಯ ನಡುವೆಯೂ ತಾಲೂಕಿನ ರೈತ ಕಲ್ಲಂಗಡಿ ಬೆಳೆ ಬೆಳೆದು ಕೈತುಂಬ ಕಾಸು ಎಣಿಸಿದ್ದಾರೆ.

ತಾಲ್ಲೂಕಿನ ಎಚ್.ಹೊಸಹಳ್ಳಿ ಗ್ರಾಮದ ರೈತ ವಿಜಯ ಭಾಸ್ಕರ್ ರೆಡ್ಡಿ ಎಂ.ಬಿ.ಎ ಪದವಿ ಪಡೆದಿದ್ದು. ಕೆಲಸ ಹುಡುಕಿಕೊಂಡು ಬೇರೆ ನಗರಗಳಿಗೆ ವಲಸೆ ಹೋಗದೆ ತಮ್ಮದೆ 10 ಎಕರೆ ಕೃಷಿ ಭೂಮಿಯಲ್ಲಿ ಕಲ್ಲಂಗಡಿ ಬೆಳೆ ಬೆಳೆದು ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ. ರೈತನ ಹೊಲಕ್ಕೆಕಾಲಿಡುತ್ತಿದ್ದಂತೆ ದಪ್ಪನೆಯ ಕಲ್ಲಂಗಡಿ ಕಾಯಿಗಳ ಹಾಸು ಕಣ್ಣಿಗೆ ರಾಚುತ್ತವೆ. ಒಂದೊಂದು ಬಳ್ಳಿಗೆ 2 ರಿಂದ 3 ಕಲ್ಲಂಗಡಿಯ ಕಾಯಿಗಳಿದ್ದು, ಅಂದಾಜು 04ಕೆಜಿಯಿಂದ 05ಕೆಜೆಯವರೆಗೆ ತೂಗುತ್ತವೆ. ಹುಲುಸಾಗಿ ಬೆಳೆದ ಕಲ್ಲಂಗಡಿ 60 ದಿನಗಳಲ್ಲಿ ಕಟಾವಿಗೆ ಬಂದಿದೆ.

ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಕಲ್ಲಂಗಡಿ ಸದ್ಯ 20ರಿಂದ 25 ರಂತೆ ಮಾರಾಟವಾಗುತ್ತಿದೆ. ಹೊಲಕ್ಕೆ ಬಂದು ವ್ಯಾಪಾರಿಗಳು ಹಣ್ಣುಗಳನ್ನು ಖರೀದಿ ಮಾಡುತ್ತಿರುವುದರಿಂದ ಈ ರೈತನಿಗೆ ಮಾರುಕಟ್ಟೆಯ ಸಮಸ್ಯೆ ಇರುವುದಿಲ್ಲ, ಸಿರುಗುಪ್ಪ, ಸಿಂಧನೂರು, ಬಳ್ಳಾರಿ, ಬೆಂಗಳೂರಿನ ವ್ಯಾಪಾರಿಗಳು ಹೊಲದಲ್ಲಿಯೇ ಬಂದು ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.

ಈ ರೈತನು ಹಿಂದೆ ಬೆಂಗಳೂರು ಸೇರಿದಂತೆ ಇತರೆ ನಗರಗಳಿಗೆ ಕೆಲಸಕ್ಕಾಗಿ ತೆರಳಿದ್ದರು. ನಗರ ಜೀವನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದಕ್ಕೆ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಮರಳಿ ಮನೆಗೆ ಬಂದು 10 ವರ್ಷದಿಂದ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಜಮೀನಿಗೆ ನೀರು ಹರಿಸಿಕೊಳ್ಳಲು ಹಿರೇಹಳ್ಳದಲ್ಲಿ ನೀರು ಸಂಗ್ರಹ ತೊಟ್ಟಿ ಮಾಡಿಕೊಂಡಿದ್ದು, ಹಿರಿಯ ರೈತರ, ತೋಟಗಾರಿಕೆ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ವೈಜ್ಞಾನಿಕವಾಗಿ ಕಲ್ಲಂಗಡಿಯನ್ನು ಬೆಳೆದಿದ್ದಾರೆ.

12 ರಿಂದ 16ಟನ್ ಮೇಲ್ಪಟ್ಟು ಕಲ್ಲಂಗಡಿ ಇಳುವರಿ ಬರುವ ನಿರೀಕ್ಷೆಯಿದೆ, ಎರಡು ತಿಂಗಳಲ್ಲಿ ಪ್ರತಿ ಎಕರೆಗೆ 70ಸಾವಿರ ಖರ್ಚು ತೆಗೆದು, ಪ್ರತಿ ಎಕರೆಗೆ ಒಂದು ಲಕ್ಷ 30000 ಲಾಭ ದೊರೆಯಲಿದೆ, ರೈತರು ಕಲ್ಲಂಗಡಿಯಲ್ಲಿಯೂ ಉತ್ತಮ ಆದಾಯ ಗಳಿಸಲು ಅವಕಾಶ ಇದೆ ಎಂದು ರೈತ ವಿಜಯ ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.

ಕೆಲ ವರ್ಷಗಳಿಂದ ಯುವ ಕೃಷಿಕರೂ ಕಲ್ಲಂಗಡಿ ಬೆಳೆಯಲ್ಲಿ ತೊಡಗಿಸಿಕೊಂಡು ಇತರೆ ಬೆಳೆಗಾರರಿಗೆ ಮಾದರಿಯಾಗಿದ್ದಾರೆ. ಕಲ್ಲಂಗಡಿ ಬೆಳೆಯುವ ರೈತರಿಗೆ ಇಲಾಖೆಯಿಂದ ಸಬ್ಸಿಡಿಯಲ್ಲಿ ವಿವಿಧ ಸೌಲಭ್ಯ ಒದಗಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು  ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.

– ಈ ರೈತರು ಬೆಳೆದ ಕಲ್ಲಂಗಡಿಯು ಸಿಹಿ ಮತ್ತು ಸ್ವಾದಿಷ್ಟವಾಗಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಲು ಕಾರಣವಾಗಿದೆ ಎಂದು ಗ್ರಾಮದ ರೈತ ಜಗದೀಶ್ ತಿಳಿಸಿದ್ದಾರೆ.