
ಬೆಂಗಳೂರು, ಏ. ೨೯- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ಮುಖ್ಯಮಂತ್ರಿಯಾದರೆ ನನಗೆ ಬಹಳ ಸಂತೋಷ. ಅವರಿಗೆ ಹೆಚ್ಚಿನ ಅನುಭವ ಇದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾವು ಈಗ ಅದರ ಬಗ್ಗೆ ಮಾತನಾಡುವುದು ಸಮಂಜಸವಲ್ಲ ಎಂದು ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎಂಬ ಕೂಗು ಎದ್ದಿದೆ. ಖರ್ಗೆ ಅವರು ಮುಖ್ಯಮಂತ್ರಿ ಆಗಬಹುದು ಎಂಬ ಮಾತುಗಳು ಕೇಳಿ ಬರತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖರ್ಗೆ ಅವರು ಸಿಎಂ ಆದರೆ ಬಹಳ ಸಂತೋಷ. ಖರ್ಗೆ ಅವರಿಗೆ ರಾಜ್ಯದ ಎಲ್ಲ ವಿಚಾರ ಗೊತ್ತಿದೆ. ಅವರು ಎಐಸಿಸಿ ಅಧ್ಯಕ್ಷರಾಗಿರುವುದು ನಮ್ಮ ಸೌಭಾಗ್ಯ. ರಾಜ್ಯ ರಾಜಕಾರಣ ಗೊತ್ತಿದೆ, ಅನುಭವ ಎಲ್ಲವೂ ಇದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಲ ಸಚಿವರು ದೆಹಲಿ ಯಾತ್ರೆ ನಡೆಸಿ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಖರ್ಗೆ ಅವರ ಜತೆ ಚರ್ಚಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದರು ಹಾಗೆಯೇ ಸಚಿವರಾದ ಜಾರಕಿಹೊಳಿ, ಮುನಿಯಪ್ಪ ಒಳ ಮೀಸಲಾತಿ ವಿಚಾರವನ್ನು ರಾಷ್ಟ್ರೀಯ ಪರಿಶಿಷ್ಟ ಆಯೋಗಕ್ಕೆ ತಿಳಿಸಲು ಹೋಗಿದ್ದರು. ದೆಹಲಿಗೆ ಹೋದಾಗ ಹೈಕಮಾಂಡ್ ಭೇಟಿ ಮಾಡುವುದು ಸಂಪ್ರದಾಯ. ಅದರಂತೆ ಭೇಟಿಯಾಗಿದ್ದಾರೆ ಅಷ್ಟೇ ಎಂದರು.
ಹುಬ್ಬಳ್ಳಿಯಲ್ಲಿ ಅಹಿಂದಾ ಸಮಾವೇಶ ನಡೆಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಹಿಂದಾ ಚಳವಳಿ ಆರಂಭವಾಗಿದೆ. ಆ ಸಮುದಾಯ ಹಿಂದೆ ಉಳಿದಿದೆ ಎಂದು. ಶಿಕ್ಷಣ, ಉದ್ಯೋಗ ಎಲ್ಲದರಲ್ಲೂ ಹಿಂದೆ ಉಳಿದಿದ್ದಾರೆ. ಎಲ್ಲ ಕಾರ್ಯಗತವಾಗಬೇಕಾದರೆ ಸಮಾವೇಶ ಆಗಲೇಬೇಕು. ಅಹಿಂದಾದಲ್ಲಿ ದಲಿತರು ಇದ್ದಾರೆ ಎಂದು ಹೇಳಿದರು.
ನಕಲಿ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಹೇಳಿದರು.

























