
ಬೀದರ್:ಏ.೨೯: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಸ್ತೆ ವ್ಯವಸ್ಥೆ ಅತ್ಯಂತ ಪ್ರಮುಖವಾದ ಮೂಲಸೌಕರ್ಯ. ಒಳ್ಳೆಯ ರಸ್ತೆ ಇದ್ದರೆ ಜನರ ಸಂಚಾರ ಸುಗಮವಾಗುತ್ತದೆ, ರೈತರು ತಮ್ಮ ಉತ್ಪನ್ನಗಳನ್ನು ಸುಲಭವಾಗಿ ಮಾರುಕಟ್ಟೆಗೆ ತಲುಪಿಸಬಹುದು, ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜುಗಳಿಗೆ ಹೋಗುವುದು ಸುಲಭವಾಗುತ್ತದೆ, ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ತಲುಪುವುದೂ ವೇಗವಾಗಿ ಸಾಧ್ಯವಾಗುತ್ತದೆ ಹೀಗಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಯದಲಾಪುರ ಹಾಗೂ ಐಯಸಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ?೧ ಕೋಟಿ ೨೦ ಲಕ್ಷ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ನಾವು ಆರಂಭಿಸಿರುವ ಈ ರಸ್ತೆ ಕಾಮಗಾರಿಯು ಕೇವಲ ರಸ್ತೆ ನಿರ್ಮಾಣವಲ್ಲ – ಇದು ನಮ್ಮ ಗ್ರಾಮಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ದಾರಿತೋರುವ ಮಹತ್ವದ ಹೆಜ್ಜೆ. ಈ ರಸ್ತೆ ನಿರ್ಮಾಣದಿಂದ ಯದಲಾಪುರ ಮತ್ತು ಐಯಸಪುರ ಗ್ರಾಮಗಳ ನಡುವಿನ ಸಂಪರ್ಕ ಬಲವಾಗುತ್ತದೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೂ ಇದರ ಪ್ರಯೋಜನ ದೊರೆಯಲಿದೆ ಎಂದರು.
ಮೂಲಸೌಕರ್ಯ, ಕುಡಿಯುವ ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ – ಈ ಎಲ್ಲಾ ಗ್ರಾಮಗಳಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವುದು ನನ್ನ ಉದ್ದೇಶವಾಗಿದೆ. ಜನರ ಜೀವನಮಟ್ಟವನ್ನು ಉತ್ತಮಗೊಳಿಸುವುದೇ ನಮ್ಮ ಧ್ಯೇಯವಾಗಿದೆ.
ಇದಕ್ಕಾಗಿ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಕಟ್ಟುನಿಟ್ಟಾಗಿ ಸೂಚನೆಗಳನ್ನು ನೀಡಲಾಗಿದೆ. ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಗುಣಮಟ್ಟದಲ್ಲಿ ತೊಂದರೆ ಕಂಡುಬAದರೆ ಅದನ್ನು ಸಹಿಸಲಾಗುವುದಿಲ್ಲ. ಜನರ ಹಣದಿಂದ ನಡೆಯುವ ಈ ಕಾಮಗಾರಿಗಳು ಜನರಿಗೆ ಉತ್ತಮ ಸೇವೆ ನೀಡಬೇಕು ಎಂಬುದು ನಮ್ಮ ದೃಢ ನಿಲುವು.
ನಾನು ಈ ಸಂದರ್ಭದಲ್ಲಿ ಸ್ಥಳೀಯ ಜನರಿಗೆ ಸಹ ಒಂದು ವಿನಂತಿ ಮಾಡುತ್ತೇನೆ – ಈ ಕಾಮಗಾರಿಯ ಮೇಲೆ ನಿಮ್ಮ ಗಮನ ಇರಲಿ, ಗುಣಮಟ್ಟ ಕಾಪಾಡಲು ಸಹಕರಿಸಿ,ನಿಮ್ಮ ಸಹಕಾರದಿಂದಲೇ ಉತ್ತಮ ಅಭಿವೃದ್ಧಿ ಸಾಧ್ಯ.
ನನ್ನ ಉದ್ದೇಶ ಸ್ಪಷ್ಟ – ಗ್ರಾಮಗಳ ಅಭಿವೃದ್ಧಿ ನಮ್ಮ ಪ್ರಾಥಮಿಕ ಗುರಿ, ಜನಸೇವೆಯೇ ನಮ್ಮ ಧ್ಯೇಯ. ಇದೇ ಧ್ಯೇಯದೊಂದಿಗೆ ನಾವು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಿಮ್ಮ ಮುಂದೆ ತರಲು ಬದ್ಧರಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಶಿವರಾಜ ಪಾಟೀಲ, ಗುಣವಂತರಾವ ಪಾಟೀಲ, ಕುಶಲ ಯಾಬಾ, ಬಸವರಾಜ ಕ್ಯಾಸಾ, ಉಮೇಶ ಯಾಬಾ, ಸತೀಶ್ ಯಾಬಾ, ಚಂದು ಮಡಕಿ, ಸೂರ್ಯಕಾಂತ ಯಕಾತಪುರೆ, ಜಗನ್ನಾಥ ಯಕಾತಪುರ,ಶಿವಕುಮಾರ ನಾಗಲಗಿದ್ದಿ, ಶಿವಾನಂದ ಚಿಟ್ಟನಳ್ಳಿ, ಅಂಬರೀಷ್ ಬೀರಾದರ, ಶಿವಾನಂದ ಚಿಟ್ಟನಳ್ಳಿ, ದತ್ತು ಹಡಪದ, ಅಶೋಕ ಬಂಡೆ, ಅಶೋಕ, ಬಸವರಾಜ ಸೋರಳ ಮತ್ತಿತರರು ಉಪಸ್ಥಿತರಿದ್ದರು.






















