Home ಜಿಲ್ಲೆ ಕಾಲು ಬಾಯಿ ರೋಗ ತಡೆಗೆ ಲಸಿಕೆ ಹಾಕಿಸಿ: ಶಾಸಕ ಪ್ರಭು ಚವ್ಹಾಣ

ಕಾಲು ಬಾಯಿ ರೋಗ ತಡೆಗೆ ಲಸಿಕೆ ಹಾಕಿಸಿ: ಶಾಸಕ ಪ್ರಭು ಚವ್ಹಾಣ

ಬೀದರ:ಏ.೨೯:ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಘಮಸುಬಾಯಿ ತಾಂಡಾ, ಬೋಂತಿ ಗೃಹ ಕಛೇರಿಯಲ್ಲಿ ಕಾಲುಬಾಯಿ ರೋಗ ತಡೆಗಟ್ಟುವ ೯ನೇ ಸುತ್ತಿನ ಲಸಿಕಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಲುಬಾಯಿ ರೋಗವು ಪಶುಗಳಲ್ಲಿ ಅತ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಹಸು, ಎಮ್ಮೆ, ಕುರಿ, ಮೇಕೆ ಸೇರಿದಂತೆ ವಿವಿಧ ಜಾನುವಾರುಗಳಿಗೆ ತೀವ್ರ ಹಾನಿ ಉಂಟುಮಾಡುತ್ತದೆ ಎಂದು ಹೇಳಿದರು.

ಈ ರೋಗದಿಂದ ಹಾಲು ಉತ್ಪಾದನೆ ಕಡಿಮೆಯಾಗುವುದು, ಪಶುಗಳ ಆರೋಗ್ಯ ಹದಗೆಡುವುದು ಮತ್ತು ರೈತರ ಆದಾಯಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಹಾಗಾಗಿ ಲಸಿಕೆ ನೀಡುವುದು ಅತ್ಯಂತ ಅವಶ್ಯಕ. ಇದು ಪರಿಣಾಮಕಾರಿ ಮತ್ತು ಸುರಕ್ಷಿತ ಲಸಿಕೆಯಾಗಿದೆ. ಲಸಿಕೆ ನೀಡುವುದರಿಂದ ಪಶುಗಳ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ರೈತರ ಆರ್ಥಿಕ ನಷ್ಟವನ್ನು ತಪ್ಪಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ಲಸಿಕಾ ಅಭಿಯಾನವನ್ನು ಯಾವುದೇ ನಿರ್ಲಕ್ಷ್ಯವಿಲ್ಲದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಪಶು ವೈದ್ಯಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಅವರು, ವ್ಯಾಪ್ತಿಯಲ್ಲಿನ ಪ್ರತಿಯೊಂದು ಹಳ್ಳಿಯಲ್ಲಿಯೂ ಎಲ್ಲಾ ಜಾನುವಾರುಗಳಿಗೆ ಲಸಿಕೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ರೈತರು ಈ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ರೈತರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹೆಚ್ಚು ನೀರು ಕುಡಿಯಿರಿ, ನೆರಳಿನಲ್ಲಿ ವಿಶ್ರಾಂತಿ ಪಡೆಯಿರಿ. ಜಾನುವಾರುಗಳನ್ನು ತೀವ್ರ ಬಿಸಿಲಿಗೆ ಬಿಡದೇ, ತಂಪಾದ ಸ್ಥಳದಲ್ಲಿ ಇರಿಸಿ ಮತ್ತು ಸಾಕಷ್ಟು ನೀರು ಒದಗಿಸಬೇಕೆಂದು ಶಾಸಕರು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಫಾಹೀಮ್ ಖುರೇಶಿ, ಡಾ.ಜಕಿಯೋದ್ದಿನ್, ಧನರಾಜ ಸೂರ್ಯವಂಶಿ, ಅನೀಲ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.