
ಬೀದರ್: ಏ.೨೮:ಅಂತರ ರಾಷ್ಟ್ರೀಯ ಬಜರಂಗದಳ ಬೀದರ್ ಜಿಲ್ಲಾ ಘಟಕದ ವತಿಯಿಂದ ಗೋಮಾತೆಗೆ ರಾಷ್ಟ್ರಮಾತೆ ಸ್ಥಾನಮಾನ ನೀಡಬೇಕು ಹಾಗೂ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಆಗ್ರಹದೊಂದಿಗೆ ಸೋಮವಾರ ನಗರದ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಅವರ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ್ ಅವರು, ಗೋಮಾತೆಯನ್ನು ರಾಷ್ಟ್ರಮಾತೆ ಎಂದು ಅಧಿಕೃತವಾಗಿ ಘೋಷಿಸುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ರೂಪಿಸಲಾಗುವುದು. ಅಗತ್ಯವಿದ್ದಲ್ಲಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಆಗಸ್ಟ್ ೧೬ರಂದು ದೆಹಲಿಯಲ್ಲಿ ಸುಮಾರು ಒಂದು ಕೋಟಿ ಗೋಭಕ್ತರನ್ನು ಸೇರಿಸಿ ಮಹಾ ಪ್ರತಿಭಟನೆ ನಡೆಸುವ ಕುರಿತು ಎಚ್ಚರಿಕೆ ನೀಡಿದರು. ಮನವಿಯಲ್ಲಿ ಗೋಸಂರಕ್ಷಣೆಗೆ ಕಠಿಣ ಕಾನೂನು ಜಾರಿಗೆ ತರಬೇಕು ಹಾಗೂ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಜರಂಗದಳದ ಜಿಲ್ಲಾಧ್ಯಕ್ಷ ವೆಂಕಟೇಶ್ ಶಾಲಿ ಚಿದ್ರಿ, ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ವಸಂತ್, ಶ್ರೀಕಾಂತ್ ಮೋದಿ, ಸಿ.ಬಿ ರೆಡ್ಡಿ, ದೀಪಕ್ ತೆಲಗಣಿ, ನರಸಿಂಗರಾವ್, ಅಮರ್ ಸಿಂಗ್ ಠಾಕೂರ್, ರಾಜಕುಮಾರ್ ಆರ್ಯ, ಭರತ್ ಮಾಲೆಗಾಂವ್, ಆಕಾಶ್, ಬಾಬುಗಿರಿ, ಸಾಯಿನಾಥ್, ಸಿದ್ದು, ವಿಷ್ಣು, ನಾರಾಯಣ್ ಹಾಗೂ ಶಾಂತು ಹಡಪದ್ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.























