
ರಬಕವಿ-ಬನಹಟ್ಟಿ,ಏ.22: ಸಾಮಾಜಿಕ ಆರ್ಥಿಕತೆಯ ಸರಿದೂಗಿಸಲು ಕಾಯಕವೇ ಪ್ರಧಾನವಾಗಿರಬೇಕೆಂದು ಬಯಸಿದ್ದ ಬಸವಣ್ಣ ಕಾಯಕವೇ ಕೈಲಾಸವೆಂದು ಘೋಷ ವಾಕ್ಯ ಮೊಳಗಿಸಿ ಕಾಯಕಕ್ಕೆ ಮತ್ತು ತನ್ಮೂಲಕ ಗಳಿಕೆಯಿಂದ ದಾಸೋಹ ನಡೆಸುವ ಮೂಲಕ ಸರ್ವರ ಉದ್ಧಾರಕ್ಕೆ ಶ್ರಮಿಸಿ, ಕಾಯಕವೇ ಮಹತ್ತರವಾದದ್ದೆಂದು ಸಾರುವ ಮೂಲಕ ವಿಶ್ವದ ಮೊದಲ ಅರ್ಥಶಾಸ್ತ್ರಜ್ಞನಾಗಿದ್ದಾರೆಂದು ರಬಕವಿ-ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ ಹೇಳಿದರು.
ತಹಶಿಲ್ದಾರ ಕಚೇರಿಯಲ್ಲಿ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ವಿಶ್ವದ ಮೊದಲ ಸಂಸತ್ತು ಪರಿಕಲ್ಪನೆ ಮೊಳಗಿಸಿದ್ದ ಬಸವಣ್ಣ ಎಲ್ಲ ವರ್ಗದ ಜನರ ಅಹವಾಲು ಕೇಳಲು ಮತ್ತು ಸಾಮಾಜಿಕ, ಧಾರ್ಮಿಕ, ರಾಜಕೀಯ ಮೊದಲಾದ ಸಮಸ್ಯೆಗಳಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವ ವ್ಯವಸ್ಥೆ ರೂಪಿಸಿದ್ದು ಇಡೀ ವಿಶ್ವದಲ್ಲೇ ಪ್ರಥಮ ಪ್ರಜಾಪ್ರಭುತ್ವದ ನೀಲನಕ್ಷೆ ರೂಪಿಸಿದ್ದರೆಂದರು. ತಾಲೂಕು ಬಣಜಿಗ ಸಮಾಜದ ಅಧ್ಯಕ್ಷ, ರಬಕವಿಯ ಅಧ್ಯಕ್ಷ ಈಶ್ವರ ಬಿದರಿ, ಗಿರೀಶ ಮುತ್ತೂರ ಮಾತನಾಡಿ ಜಾತಿ ತಾರತಮ್ಯತೆ, ದೈವಿಕತೆಯ ಕುರಿತಾದ ಕಂದಾಚಾರಗಳಿಂದ ಸಮಾಜ ಮುಕ್ತಗೊಳಿಸಲು ಅಂಗೈಯಲ್ಲಿ ಲಿಂಗ ಪರಿಕಲ್ಪನೆಯಡಿ ಆಚರಣೆಗಳ ಸರಳೀಕರಣಗೊಳಿಸಿ, ಅಂದಿನ ಅನಿಷ್ಟ ಕಂದಾಚಾರಗಳನ್ನು ಮತ್ತು ಅಡಂಬರಗಳನ್ನು ಖಂಡಿಸುವ ಮೂಲಕ ಅರಿವಿನ ಪ್ರಭೆ ಹೊತ್ತಿಸಿ ಜಗಜ್ಯೋತಿ ಬಸವೇಶ್ವರರಾದರೆಂದರು.
ಈ ಸಂದರ್ಭದಲ್ಲಿ ತೇರದಾಳ ತಹಶೀಲ್ದಾರ ವಿಜಯಕುಮಾರ ಕಡಕೋಳ, ತಾಲೂಕು ಪಶು ಇಲಾಖೆಯ ಸಹನಿರ್ದೇಶಕ ಬಸವರಾಜ ಗೌಡರ, ಶಿರಸ್ತೇದಾರ ರಾಜಶೇಖರ ಸಾತಿಹಾಳ, ಪ್ರಕಾಶ ಮಠಪತಿ, ಸದಾಶಿವ ಕುಂಬಾರ, ಪ್ರಕಾಶ ವಂದಾಲ, ಮಹಾದೇವಪ್ಪ ಮುತ್ತೂರ, ಚಂದ್ರಶೇಖರ ಹುಲಗಬಾಳಿ, ಸೋಮಶೇಖರ ಕೊಟ್ರಶೆಟ್ಟಿ, ಸÀದಾಶಿವ ಗಾಯಕವಾಡ, ಧರೆಪ್ಪ ಉಳ್ಳಾಗಡ್ಡಿ, ಪ್ರಭು ಪಾಲಭಾಂವಿ, ಉಮೇಶ ಹನಗಂಡಿ, ಬಶೆಟ್ಟೆಪ್ಪ ಕುಂಚನೂರ, ವಿಜಯ ನಾಶಿ, ಸಂಜಯ ತೆಗ್ಗಿ, ಎಂ.ಎಸ್.ಗಡೆನ್ನವರ, ವಿಜಯಕುಮಾರ ಹಲಕುರ್ಕಿ ಸೇರಿದಂತೆ ಪ್ರಮುಖರಿದ್ದರು.

























