Home ಮುಖಪುಟ ಸುದ್ದಿ ಮಠ ತೊರೆಯಲು ವಚನಾನಂದ ಶ್ರೀಗೆ ವಾರ ಗಡುವು

ಮಠ ತೊರೆಯಲು ವಚನಾನಂದ ಶ್ರೀಗೆ ವಾರ ಗಡುವು

ದಾವಣಗೆರೆ, ಏ. ೧೬- ಪಂಚಮಸಾಲಿ ಸಮಾಜದ ಏಳಿಗೆಗಾಗಿ ಕಟ್ಟಿರುವ ಟ್ರಸ್ಟನ್ನು ವಚನಾನಂದ ಸ್ವಾಮೀಜಿ ಸ್ವಂತಕ್ಕೆ ಬಳಸಿಕೊಳ್ಳುವ ಮೂಲಕ ಸಮಾಜಕ್ಕೆ ದ್ರೋಹ ಎಸಗಿದ್ದೀರಿ. ಅಲ್ಲದೆ ಲೆಕ್ಕ ಕೊಡುವ ವಿಚಾರದಲ್ಲಿ ನಿಮ್ಮ ವರ್ತನೆ ಸಹಿಸಲು ಸಾಧ್ಯವಿಲ್ಲ. ಮುಂದಿನ ಗುರುವಾರದ ವೇಳೆಗೆ ಮಠ ಖಾಲಿ ಮಾಡಿ ಎಂದು ಪಂಚಮಸಾಲಿ ಸಮಾಜದ ಮುಖಂಡ ಎಚ್‌ಎಸ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವಚನಾನಂದ ಸ್ವಾಮಿಗಳಿಗೆ ಯಾತಕ್ಕೆ ದುಡ್ಡು ಬೇಕು. ಟ್ರಸ್ಟ್ ಮೂಲಕ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಲಾಗುತ್ತದೆ. ಆದರೆ ಸ್ವಾಮಿಗಳಿಗೆ ಹಣ ಏಕೆ ಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದರೆ, ಈಗ ಸ್ವಾಮೀಜಿಗಳ ಪರವಾಗಿ ಲೆಕ್ಕ ಕೊಡಿ ಚಳವಳಿ ಆರಂಭಿಸಿರುವ ಎಲ್ಲರ ಇತಿಹಾಸಗಳು ಗೊತ್ತಿವೆ. ತಾವುಗಳು ಹತ್ತಿದ ಏಣಿಯನ್ನು ಒಡೆಯುವಂತಹ ಜಾಯಮಾನ ಅವರದು. ಅವರ ಇತಿಹಾಸ ಎಲ್ಲರಿಗೂ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಮಾತನಾಡದೆ ಇರುವುದೇ ಸೂಕ್ತ ಎಂದು ಹೇಳಿದರು.

ನಿಮ್ಮ ತಪ್ಪುಗಳನ್ನು ಮರೆಮಾಚಲು ಸಲುವಾಗಿ ಲೆಕ್ಕ ಕೊಡಿ ಚಳವಳಿ ಆರಂಭಿಸುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಸಮಾಜವನ್ನು ಹೊಡೆಯುತ್ತಿರುವ ಸ್ವಾಮೀಜಿಗಳು ಈ ಕೂಡಲೇ ಪೀಠವನ್ನು ತ್ಯಜಿಸಿ ನಿರ್ಗಮನ ಮಾಡಬೇಕು. ಇಲ್ಲವಾದರೆ ಸಾವಿರಾರು ಜನ ಸೇರಿ ನಿಮ್ಮನ್ನು ಹೊರ ಹಾಕಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಟ್ರಸ್ಟಿನ ಧರ್ಮದರ್ಶಿ ಉಮಾಪತಿಯವರು ಸಮಾಜಕ್ಕೆ ಸಾಕಷ್ಟು ತ್ಯಾಗ, ಸಹಕಾರವನ್ನು ಮಾಡಿದ್ದಾರೆ. ಸಮಾಜದ ಬೆಳವಣಿಗೆಗೆ ಅವರ ಕೊಡುಗೆ ಅನನ್ಯ. ಇಂಥವರನ್ನು ಲೆಕ್ಕ ಕೊಡಿ ಎಂದು ಪ್ರಶ್ನಿಸುವುದು ನಿಮಗೆ ನೈತಿಕತೆ ಇದೆ ಎಂದು ಪ್ರಶ್ನಿಸಿದರು.