Home ಜಿಲ್ಲೆ ಕಲಬುರಗಿ ಸಂವಿಧಾನದ ಆಶಯ ಈಡೇರಿಸಲು ಸಂಕಲ್ಪ ಅಗತ್ಯ: ಶಾಸಕ ಬಿ.ಆರ್. ಪಾಟೀಲ

ಸಂವಿಧಾನದ ಆಶಯ ಈಡೇರಿಸಲು ಸಂಕಲ್ಪ ಅಗತ್ಯ: ಶಾಸಕ ಬಿ.ಆರ್. ಪಾಟೀಲ

ಆಳಂದ:ಏ.15: ತಾಲೂಕು ಆಡಳಿತ ಸೌಧದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಜ್ಯದ ನೀತಿ ಮತ್ತು ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ ಅವರು ಮಾತನಾಡಿ, “ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಗಳನ್ನು ನೈಜ ಜೀವನದಲ್ಲಿ ಈಡೇರಿಸಲು ಇಂದಿನ ಸಮಾಜ ಸಂಕಲ್ಪದಿಂದ ಮುಂದುವರಿಯಬೇಕು” ಎಂದು ಹೇಳಿದರು.
ಅವರು ಮುಂದುವರೆದು, “ಸಂಪೂರ್ಣ ನ್ಯಾಯ ಎನ್ನುವುದು ಅಂಬೇಡ್ಕರ್ ಅವರ ಮಹತ್ತರ ಕನಸು. ಆ ಕನಸನ್ನು ನನಸಾಗಿಸಲು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಸೌಹಾರ್ದತೆ ಬೆಳೆಯುವಂತೆ ಚಿಂತನೆ ಹಾಗೂ ಕಾರ್ಯಪ್ರವೃತ್ತಿ ಅಗತ್ಯವಾಗಿದೆ. ಸಮಾಜ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ಆಗದೇ ಇದ್ದರೆ ಸಮಾನ ಅವಕಾಶಗಳ ಸಾಧನೆ ಸಾಧ್ಯವಿಲ್ಲ. ದೇಶದಲ್ಲಿ ಸಂಪತ್ತಿನ ಸಮನ್ವಯ ಹಾಗೂ ವಿಕೇಂದ್ರೀಕರಣ ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟದ ಮನೋಭಾವ ಬೆಳೆಸಿಕೊಂಡು, ಅದರ ಅನುμÁ್ಠನಕ್ಕೆ ಒಗ್ಗೂಡಬೇಕು” ಎಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಹಾಗೂ ಉಪನ್ಯಾಸಕ ಜಿತೇಂದ್ರ ತಳವಾರ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರ ಜೀವನ ಸಂದೇಶ, ಶಿಕ್ಷಣದ ಮಹತ್ವ ಹಾಗೂ ಸಂವಿಧಾನದ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಸಮಾಜ ಕಲ್ಯಾಣಾಧಿಕಾರಿ ವಿಜಲಕ್ಷ್ಮಿ ಹೋಳ್ಕರ್, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಹಿರಿಯ ಮುಖಂಡ ದಯಾನಂದ ಶೇರಿಕಾರ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಂದ್ರನಾಥ ಹೊನ್ನಪ್ಪಗೊಳ, ಜಿಪಂ ಎಇಇ ಸಂಗಮೇಶ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ನಾಗರಿಕ ಮುಖಂಡರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇಸಿಒ ಶ್ರೀಮಂತ ಪಾಟೀಲ ನಿರೂಪಿಸಿದರು. ಇಒ ಮಾನಪ್ಪ ಕಟ್ಟಿಮನಿ ಸ್ವಾಗತಿಸಿದರು.