
ಲಕ್ಷ್ಮೇಶ್ವರ,ಏ8: ಪಟ್ಟಣದ ಅನೇಕ ಕಡೆ ಬಾಯ್ದೆರೆದ ಚರಂಡಿಗಳು, ಹಳ್ಳ ಹಿಡಿದ ಒಳಚರಂಡಿ ಯೋಜನೆಯ ಚಂಬರ್‍ಗಳು, ಕುಸಿದ ಸಿಡಿಗಳು ಅಪಾಯಕ್ಕೆ ಅಹ್ವಾನ ನೀಡುತ್ತಿವೆ. ನಿತ್ಯ ಇವುಗಳಿಂದ ಬಚಾವಾಗಲು ವಾಹನ ಸವಾರರು, ಮಕ್ಕಳು,ವೃದ್ದರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ. ಇವುಗಳಿಂದ ದಿನನಿತ್ಯ ಅವಾಂತರ, ಅಪಘಾತ, ಅನಾಹುತ ಆಗುತ್ತಲೇ ಇರುತ್ತವೆ. ಮನೆಯಿಂದ ಹೊರ ಹೋದವರನ್ನು ದೇವರೇ ಕಾಪಾಡಬೇಕು ಎಂಬ ಪರಿಸ್ಥಿತಿ ಇಲ್ಲಿಯದ್ದಾಗಿದೆ. ಸಾರ್ವಜನಿಕರು ಪುರಸಭೆಯ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಲೇ ಇರುತ್ತಾರೆ.
ಇದಕ್ಕೆ ಉದಾಹರಣೆ ಎಂಬಂತೆ ಬಜಾರ್ ರಸ್ತೆಯ ಹಾವಳಿ ಆಂಜನೇಯ ದೇವಸ್ಥಾನ ಹಿಂದಿನ ದೊಡ್ಡದಾದ ತೆರೆದ ಚರಂಡಿ ಹತ್ತಿರ ಸ್ಕೂಟಿ ಸವಾರ ಮತ್ತು ಟಾಟಾ ಏಸ್ ನಡುವೆ ಅಪಘಾತ ನಡೆದು ಸವಾರ ಆಳೆತ್ತರದ ಚರಂಡಿಗೆ ಬಿದ್ದಿದ್ದಾನೆ. ಕೂಡಲೇ ಚರಂಡಿಗೆ ಬಿದ್ದ ವ್ಯಕ್ತಿಯನ್ನು ಅಲ್ಲಿದ್ದ ಸಾರ್ವಜನಿಕರು ಮೇಲೆತ್ತಿ ರಕ್ಷಿಸಿದ್ದಾರೆ. ಸ್ಕೂಟಿ, ನುಜ್ಜುಗುಜ್ಜಾಗಿದೆ. ನಿತ್ಯ ನಡೆಯುತ್ತಿರುವ ಇಂತಹ ಅನಾಹುತಕ್ಕೆ ಹೊಣೆಗಾರರು ಯಾರು? ಎಂಬುದು ಸಾರ್ವಜನಿಕರ ಅಳಲಾಗಿದೆ.
ರಸ್ತೆ ತಿರುವಿನಲ್ಲೇ ಇರುವ ಈ ತೆರದ ಚರಂಡಿಯಿಂದ ಸಾಕಷ್ಟು ಅವಾಂತರಗಳಾಗುತ್ತಿವೆ. ಪಟ್ಟಣದಲ್ಲಿ ಇಂತಹ ಅನೇಕ ತೆರೆದ ಚರಂಡಿಗಳಿದ್ದು ಆಗುತ್ತಿರುವ ಅನಾಹುತಗಳಿಂದ ತಪ್ಪಿಸುವ ಹೊಣೆಗಾರಿಕೆಯಿಂದ ಸಂಬಂಧಪಟ್ಟ ಪುರಸಭೆ ನುಣುಚಿಕೊಳ್ಳದಂತೆ ಜವಾಬ್ದಾರಿ, ಜನಪರ ಕಾಳಜಿ ಮೆರೆಯಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.






















