Home ಜಿಲ್ಲೆ ಕುಡಿಯುವ ನೀರು ಕೊರತೆ ಉಂಟಾಗದಂತೆ ಎಚ್ಚರ ವಹಿಸಿ

ಕುಡಿಯುವ ನೀರು ಕೊರತೆ ಉಂಟಾಗದಂತೆ ಎಚ್ಚರ ವಹಿಸಿ

ಧಾರವಾಡ,ಏ1: ಬೇಸಿಗೆಯ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಎಚ್ಚರ ವಹಿಸಲು ಗ್ರಾಮೀಣ ಕುಡಿಯುವ ನೀರು ನಿರ್ವಹಿಸುವ ಅಧಿಕಾರಿಗಳಿಗೆ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಸೂಚಿಸಿದರು.

ಇಲ್ಲಿಗೆ ಸಮೀಪದ ಕಿತ್ತೂರಿನಲ್ಲಿ ಮಂಗಳವಾರ ಜರುಗಿದ ತಾಲೂಕು ಕೆಡಿಪಿ ಸಭೆಯಲ್ಲಿ ಹೊಸಟ್ಟಿ, ಸಿಂಗನಹಳ್ಳಿ, ಲೋಕೂರು, ಶಿಬಾರಗಟ್ಟಿ ಸೇರಿ ಆರೇಳು ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗಿರುವ ಬಗ್ಗೆ ತಮಗೆ ದೂರುಗಳು ಬಂದಿದ್ದು, ಅಧಿಕಾರಿಗಳು ಕೂಡಲೇ ಈ ಗ್ರಾಮಗಳಿಗೆ ಬೋರವೆಲ್ ಅಥವಾ ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಜಲ ಜೀವನ ಮಿಷನ್ ಧಾರವಾಡ ಗ್ರಾಮೀಣ ಮಾತ್ರವಲ್ಲದೇ ಇಡೀ ಜಿಲ್ಲೆಯಲ್ಲಿಯೇ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಎಲ್‍ಎಂಡ್‍ಟಿ ಸಂಸ್ಥೆ ಬಗ್ಗೆ ತುಂಬಾ ದೂರುಗಳಿದ್ದು, ಈಗಾಗಲೇ ದಂಡ ವಿಧಿಸಿದರೂ ಅವರು ತಮ್ಮ ಕಾರ್ಯವನ್ನು ಸರಿಯಾಗಿ ಮಾಡುತ್ತಿಲ್ಲ. ಬೋರವೆಲ್ ನೀರು ಕುಡಿಯುವ ಧಾರವಾಡ ಗ್ರಾಮೀಣ ಪ್ರದೇಶಕ್ಕೆ ಕೂಡಲೇ ಪೈಪಲೈನ್ ಅಳವಡಿಸಿ ಈ ಯೋಜನೆ ಮೂಲಕ ಮಲಪ್ರಭಾ ನೀರು ಕೊಡಬೇಕೆಂಬುದು ನಮ್ಮ ಆಶಯ. ಆದರೆ, ಕಾಮಗಾರಿ ಗುತ್ತಿಗೆ ಪಡೆದಿರುವ ಎಲ್ ಅಂಡ್ ಟಿ ಕಂಪನಿ ಅಧಿಕಾರಿಗಳು ತೀರಾ ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರುವ ದಿನಗಳಲ್ಲಿ ಕಂಪನಿ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಯಿಸಿ ಯೋಜನೆ ಅನುಷ್ಠಾನ, ಪೈಪಲೈನ್ ಅಳವಡಿಸಲು ಹಾಳು ಮಾಡಿದ ರಸ್ತೆಯನ್ನು ವೈಜ್ಞಾನಿಕವಾಗಿ ಮರು ನಿರ್ಮಾಣ, ಮನೆ ಮನೆಗೆ ಅಳವಡಿಸಿರುವ ಪೈಪಲೈನ್ ಗುಣಮಟ್ಟದ ಬಗ್ಗೆ ಪ್ರಶ್ನಿಸಿ ಆಗಿರುವ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದರು.

ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ಮಾಡಿದ ಶಾಸಕ ವಿನಯ ಕುಲಕರ್ಣಿ, ಗ್ರಾಮೀಣದ ಕಿರಾಣಿ ಸೇರಿದಂತೆ ಚಹಾ ಅಂಗಡಿಗಳಲ್ಲಿ ಸರಾಯಿ ಮಾರಲಾಗುತ್ತಿದೆ. ಎಲ್ಲೆಂದರಲ್ಲಿ ಇಸ್ಪೀಟು, ಮಟಕಾ ದಂಧೆ ನಡೆದಿದೆ. ಇದರಿಂದ ಯುವ ಜನಾಂಗ ಹಾಳಾಗುತ್ತಿದ್ದು, ಮನೆ-ಮಠ ಮಾರುವ ಸ್ಥಿತಿಗೆ ಬಂದಿದ್ದಾರೆ. ಗ್ರಾಮೀಣದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟ ಬಂದ್ ಮಾಡುವಲ್ಲಿ ಪೆÇಲೀಸರು ಹಾಗೂ ಅಬಕಾರಿ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಸಿದರು.
ಸಭೆಗೂ ಮುಂಚೆ ರೈತ ಫಲಾನುಭವಿಗಳಿಗೆ ಪಂಪಸೆಟ್ ವಿತರಣೆ, ರೈತ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ಪರಿಹಾರ, ವಿಧವಾ ವೇತನ ಹಾಗೂ ಇತರೆ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಹಂಚಲಾಯಿತು. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾದ ಶಿವಲೀಲಾ ಕುಲಕರ್ಣಿ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಅರವಿಂದ ಏಗನಗೌಡರ, ತಹಸೀಲ್ದಾರ ದೊಡ್ಡಪ್ಪ ಹೂಗಾರ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ,ಕೆ ಡಿ ಪಿ ಸದಸ್ಯರುಗಳಾದ ಮಡಿವಾಳಪ್ಪ ಉಳವಣ್ಣವರ, ಹನಮಂತ ಮಾರಡಗಿ, ಈರಪ್ಪ ಏನಗಿ, ಸಂತೋಷ ಕರಗೂಳಿ,ಪ್ರೇಮ ಕೆಂಗನೂರ, ಶಹನಾಜಬೇಗಂ ಬಾನಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.