
ಧಾರವಾಡ,ಮಾ31: ಸಹಕಾರ ಕ್ಷೇತ್ರವು ಜನಸೇವೆಗಾಗಿ ಇದೆ. ಕೇವಲ ಲಾಭಕ್ಕಾಗಿ ಸಂಸ್ಥೆಯು ಕೆಲಸ ಮಾಡುವುದಿಲ್ಲ, ಬದಲಿಗೆ ಅದು ಜನರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಇರುವ ಒಂದು ಅದ್ಭುತ ವೇದಿಕೆ ಎಂದು ಸಂಶಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೋಸಾಯಿಟಿ ಅಧ್ಯಕ್ಷ ಎ.ಬಿ.ಉಪ್ಪಿನ ತಿಳಿಸಿದರು.
ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಶ್ರೀ ಮೃತ್ಯುಂಜಯ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೋಸಾಯಿಟಿ ನಿ., ಧಾರವಾಡ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು ಹಾಗೂ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ನಡೆದ ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಹಾಗೂ ಸದಸ್ಯರ ನಡುವಿನ ಬಾಂಧವ್ಯದ ಕುರಿತು ಕ್ಲಸ್ಟರ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಕೆಳಹಂತದ ಜನರಿಗೆ, ಅದರಲ್ಲೂ ರೈತರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತದೆ. ಸಹಕಾರ ಕ್ಷೇತ್ರವು ಹಳ್ಳಿಗಳ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ಸ್ವಾವಲಂಬಿ ಬದುಕನ್ನು ನಿರ್ಮಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ಸಹಕಾರ ಸಂಸ್ಥೆಗಳು ಜಾತಿ, ಪಕ್ಷ ಮತ್ತು ಧರ್ಮ ರಹಿತವಾಗಿ, ಸದಸ್ಯರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸಬೇಕು. ಸಹಕಾರ ಕ್ಷೇತ್ರದ ಕುರಿತು ಯುವಕರು ಹೆಚ್ಚಾಗಿ ತಿಳುವಳಿಕೆ ಹೊಂದಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಾಪುಗೌಡ ಪಾಟೀಲ, ಕೆ.ಸಿ.ಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಶಿವಾನಂದ ಹೂಗಾರ, ಅಧ್ಯಕ್ಷತೆ ವಹಿಸಿದ್ದ ಶ್ರೀ ಮೃತ್ಯುಂಜಯ ಅರ್ಬನ್ ಕೋ ಆಪರೇಟಿವ್ ಸೋಸಾಯಿಟಿ ಅಧ್ಯಕ್ಷ ಕಳಕಪ್ಪ ಎಚ್ ಗುರಿಕಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾದೇವಿ ಕಬ್ಬೂರ, ಬಸವರಾಜ ಕಪಲಿ, ಈಶ್ವರಗೌಡ ಪಾಟೀಲ, ಅರವಿಂದ ಕಪಲಿ, ಲಕ್ಷ್ಮಣ ಕಬ್ಬೂರ, ಜಗದೀಶ ಹೋಳೆಯಣ್ಣವರ, ಮಾರ್ಕಂಡೇಯ ದೊಡ್ಡಮನಿ, ಬಸವಣ್ಣೆಪ್ಪ ಶಿವಳ್ಳಿ, ಪಾರ್ವತಿ ಹಾಲಭಾವಿ, ಜ್ಯೋತಿ ಭಾವಿಕಟ್ಟಿ, ರಾಜಕುಮಾರ ಕೊಟ್ಟೂರಶೆಟ್ಟರ, ಗದಿಗೆಪ್ಪ ಜಕ್ಕಣ್ಣವರ, ಕಾನೂನು ಸಲಹೆಗಾರ ಶಿವಾನಂದ ಭಾವಿಕಟ್ಟಿ, ಕಿರಣ್.ಎ., ಅನಿತಾ ಸುರೇಬಾನ, ಬಸವರಾಜ ಮೇಟಿ, ಮೇಘರಾಜ ಹದ್ಲಿ ಇತರರಿದ್ದರು.






















