
ಯಾದಗಿರಿ:ಮಾ.೩೧:ಅಸಂಘಟಿತ ಹಾಗೂ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಉಚಿತ ಸ್ಮಾರ್ಟ್ ಕಾರ್ಡ್ ಯೋಜನೆ ಜಿಲ್ಲೆಯಲ್ಲಿ ಗಂಭೀರ ವಿವಾದಕ್ಕೆ ಕಾರಣವಾಗಿದೆ. ನೇರವಾಗಿ ಕಾರ್ಮಿಕರಿಗೆ ತಲುಪಬೇಕಾದ ಸೌಲಭ್ಯಗಳು ಮಧ್ಯವರ್ತಿಗಳ ಮೂಲಕ ವಿತರಣೆ ಆಗುತ್ತಿರುವುದು ಹಾಗೂ ಅದಕ್ಕೆ ಹಣ ವಸೂಲಿ ನಡೆಯುತ್ತಿದೆ ಎಂಬ ಆರೋಪಗಳು ಕಾರ್ಮಿಕರ ಅಸಮಾಧಾನವನ್ನು ಉಂಟುಮಾಡಿವೆ.
ಟೈಲರಿAಗ್, ಬೀಡಿ, ಮನೆ ಕೆಲಸ, ಆಟೋ ಚಾಲನೆ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ನೀಡಬೇಕಾದ ಸ್ಮಾರ್ಟ್ ಕಾರ್ಡ್ಗಳು, ಕಿಟ್ಗಳು ಹಾಗೂ ತರಬೇತಿ ಪ್ರಮಾಣಪತ್ರಗಳು ಬಹುಕಾಲದಿಂದ ಬಾಕಿ ಉಳಿದಿದ್ದು, ಇತ್ತೀಚೆಗೆ ಅವುಗಳನ್ನು ಸಂಘಟನೆಗಳ ಮೂಲಕ ಹಂಚಿಕೆ ಮಾಡಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೂಲತಃ ಉಚಿತವಾಗಿ ದೊರಕಬೇಕಾದ ಈ ಸೌಲಭ್ಯಗಳಿಗೆ “ಸೇವಾ ವೆಚ್ಚ” ಎಂಬ ಹೆಸರಿನಲ್ಲಿ ಹಣ ಕೇಳಲಾಗುತ್ತಿದೆ ಎಂಬ ಮಾತುಗಳು ವ್ಯಾಪಕವಾಗಿವೆ.
ನಗರದ ಚಿತ್ತಾಪುರ ರಸ್ತೆಯ ಜೈ ಭವಾನಿ ಕಾಂಪ್ಲೆಕ್ಸ್ ಬಳಿ, ಚಾಲುಕ್ಯ ಹೋಟೆಲ್ ಸಮೀಪದಲ್ಲಿರುವ ‘ನೇರುವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘಟನೆ’ ಕಚೇರಿಯಲ್ಲಿ ಕಾರ್ಡ್ ವಿತರಣೆ ನಡೆಯುತ್ತಿದ್ದು, ಇಲ್ಲಿ ಕಾರ್ಮಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಾರ್ಡ್ಗೆ ?೫೦ ಹಾಗೂ ಕಿಟ್ಗಳಿಗೆ ?೧೦೦ ಸೇರಿ ?೧೫೦ ನೀಡಿದ ಬಳಿಕವೇ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎನ್ನಲಾಗಿದ್ದು, ಹಣ ನೀಡದಿದ್ದರೆ ಕಾರ್ಡ್ ನೀಡುವುದಿಲ್ಲ ಎಂಬ ಸ್ಪಷ್ಟ ಮಾತುಗಳನ್ನು ಹೇಳಲಾಗುತ್ತಿದೆ ಎಂದು ಕಾರ್ಮಿಕರು ದೂರಿದ್ದಾರೆ.
ಜಿಲ್ಲೆಯ ವಿವಿಧ ವಿತರಣಾ ಕೇಂದ್ರಗಳಲ್ಲಿಯೂ ಇದೇ ರೀತಿಯ ದೂರುಗಳು ಕೇಳಿಬರುತ್ತಿದ್ದು, ಕಾರ್ಮಿಕರು ಕಾರ್ಡ್ ಪಡೆಯಲು ಹೋದಾಗ ?೫೦ರಿಂದ ?೧೫೦ರವರೆಗೆ ಹಣ ಕೇಳಲಾಗುತ್ತಿದೆ ಎನ್ನಲಾಗಿದೆ. ಹಣ ನೀಡದಿದ್ದರೆ ವಿತರಣೆಯಲ್ಲಿ ವಿಳಂಬ ಅಥವಾ ನಿರಾಕರಣೆ ಎದುರಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಬಡ ಕಾರ್ಮಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದ್ದು, ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದೇ ಕಾರ್ಡ್ ಕೆಲವೆಡೆ ಉಚಿತವಾಗಿ ಸಿಗುತ್ತದೆ, ಆದರೆ ಇಲ್ಲಿ ಹಣ ಕೇಳುತ್ತಾರೆ” ಎಂದು ಕಾರ್ಮಿಕರು ಪ್ರಶ್ನಿಸಿದಾಗ, “ಸಂಘಟನೆಯ ನಿಯಮದಂತೆ ನಡೆಯುತ್ತಿದೆ” ಎಂಬ ಉತ್ತರ ನೀಡಲಾಗುತ್ತಿದೆ ಎನ್ನಲಾಗಿದೆ. ಈ ಹೇಳಿಕೆಗಳು ವಿತರಣಾ ವ್ಯವಸ್ಥೆಯ ಪಾರದರ್ಶಕತೆ ಕುರಿತಾಗಿ ಅನುಮಾನಗಳನ್ನು ಮತ್ತಷ್ಟು ಗಾಢಗೊಳಿಸಿವೆ.
ಈ ಕುರಿತು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಹತ್ತಿಕುಣಿ ಫೋನ್ ಮೂಲಕ ಪ್ರತಿಕ್ರಿಯೆ ನೀಡಿದ್ದು, “ಕಾರ್ಡ್ಗೆ ?೫೦ ಮತ್ತು ಕಿಟ್ಗೆ ?೧೦೦ ಸೇರಿ ?೧೫೦ ನಿಗದಿ ಮಾಡಲಾಗಿದೆ. ಇದು ಕಾರ್ಮಿಕ ಇಲಾಖೆ ಹಾಗೂ ಹೆಡ್ ಆಫೀಸ್ ಸೂಚನೆಯಂತೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಈ ಹೇಳಿಕೆಯೇ ಇದೀಗ ಇಲಾಖೆಯ ಪಾತ್ರದ ಮೇಲೆಯೇ ಪ್ರಶ್ನೆಗಳನ್ನು ಎಬ್ಬಿಸಿದೆ.
ಉಚಿತವಾಗಿ ದೊರಕಬೇಕಾದ ಸರ್ಕಾರಿ ಸೌಲಭ್ಯಗಳಿಗೆ ಹಣ ವಸೂಲಿ ಮಾಡುವುದು ಕಾನೂನುಬಾಹಿರವಾಗಿದ್ದು, ಇದರಿಂದ ಬಡ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುತ್ತಿರುವುದು ಸ್ಪಷ್ಟವಾಗಿದೆ. ದೀರ್ಘಕಾಲದಿಂದ ಕಾರ್ಡ್ಗಾಗಿ ಕಾಯುತ್ತಿದ್ದ ಕಾರ್ಮಿಕರಿಗೆ ಕೊನೆ ಹಂತದಲ್ಲಿ ಹಣ ಕೇಳುತ್ತಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನೊಂದೆಡೆ, ಸಂಘಟನೆಗಳ ಪ್ರತಿನಿಧಿಗಳು “ದಾಖಲೆ ಪರಿಶೀಲನೆ ಹಾಗೂ ವಿತರಣೆ ವ್ಯವಸ್ಥೆಗೆ ಆಗುವ ವೆಚ್ಚಕ್ಕಾಗಿ ಮಾತ್ರ ಈ ಮೊತ್ತ ಸಂಗ್ರಹಿಸಲಾಗುತ್ತಿದೆ” ಎಂದು ಸಮರ್ಥಿಸಿಕೊಳ್ಳುತ್ತಿದ್ದರೂ, ಇದು ಸರ್ಕಾರದ ಉಚಿತ ಯೋಜನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಈ ನಡುವೆ, ಕಾರ್ಮಿಕ ಇಲಾಖೆಯ ಮೇಲ್ವಿಚಾರಣೆ ಹಾಗೂ ಜವಾಬ್ದಾರಿತನ ಕುರಿತ ಪ್ರಶ್ನೆಗಳು ಗಂಭೀರವಾಗುತ್ತಿದ್ದು, ನೇರ ವಿತರಣೆಯ ಬದಲು ಮಧ್ಯವರ್ತಿಗಳ ಮೂಲಕ ಸೌಲಭ್ಯ ನೀಡುವ ಕ್ರಮವೇ ವಿವಾದದ ಕೇಂದ್ರಬಿAದುವಾಗಿದೆ.
ಈ ಹಿನ್ನೆಲೆ, ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸಬೇಕು. ಅಕ್ರಮ ಸಾಬೀತಾದಲ್ಲಿ ಸಂಬAಧಿತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಯಾವುದೇ ಶುಲ್ಕವಿಲ್ಲದೆ ನಿಜವಾದ ಪ್ರಯೋಜನಾರ್ಥಿಗಳಿಗೆ ಸೌಲಭ್ಯ ತಲುಪುವಂತೆ ಕ್ರಮ ವಹಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.






















