
ಗುರುಮಠಕಲ್:ಮಾ.22: ತಾಲೂಕಿನ ಯಂಪಾಡ ಗ್ರಾಮದಲ್ಲಿ ನಡೆದ ಜಾತಿ ಆಧಾರಿತ ದೌರ್ಜನ್ಯ ಪ್ರಕರಣವು ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ಆತಂಕ ಮೂಡಿಸಿದೆ. ಆಂಜನೇಯ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯ ಯುವಕರ ಮೇಲೆ ಸವರ್ಣ ಸಮುದಾಯದ ಕೆಲವರು ದಾಳಿ ನಡೆಸಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಘಟನೆಯ ವಿವರಗಳ ಪ್ರಕಾರ, ಕಾಕಲವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂ.ಟಿ.ಪಳ್ಳಿ ಗ್ರಾಮದ ಅನಂತಮ್ಮ ಮೀದಿಗಡ್ಡಾ ಹಾಗೂ ಪೆÇೀಷಪ್ಪ ಮೀದಿಗಡ್ಡ ಅವರ ಪುತ್ರ ಮಹಾಂತೇಶನ ಜವಳ ಕಾರ್ಯಕ್ರಮವನ್ನು ಯಂಪಾಡ ಗ್ರಾಮದ ಹನುಮ ಮಂದಿರದ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ಗಾಜರಕೋಟ ಗ್ರಾಮದ ಅನಿಲ್ ಕುಮಾರ ಮತ್ತು ಬೇನಳ್ಳಿ ಗ್ರಾಮದ ಸಿದ್ದು ಸೇರಿದಂತೆ ಅನೇಕರು ಹಾಜರಾಗಿದ್ದರು.
ಕಾರ್ಯಕ್ರಮ ನಡೆಯುತ್ತಿರುವ ವೇಳೆ ಅನಿಲ್ ಕುಮಾರ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿದ್ದರಿಂದ, ಕೆಲವರು “ನೀವು ಇಲ್ಲಿ ಕುಳಿತುಕೊಳ್ಳಬಾರದು” ಎಂದು ತಡೆಯಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ಅನಿಲ್ ಕುಮಾರ “ಜಾತಿ ಆಧಾರಿತ ಭೇದಭಾವಕ್ಕೆ ಅವಕಾಶ ಇಲ್ಲ, ದೇವಾಲಯವು ಎಲ್ಲರಿಗೂ ಸಮಾನ ಹಕ್ಕಿನ ಸ್ಥಳ” ಎಂದು ಹೇಳಿದ್ದಾಗಿ ತಿಳಿದುಬಂದಿದೆ.
ಈ ಮಾತಿನಿಂದ ಆಕ್ರೋಶಗೊಂಡ ಕೆಲ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದು, ಅನಿಲ್ ಕುಮಾರ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಘಟನೆಯ ವೇಳೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ರಕ್ತಸ್ರಾವದಿಂದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯನ್ನು ಇನ್ನಷ್ಟು ಗಂಭೀರಗೊಳಿಸಿದ ಅಂಶವೆಂದರೆ, ಪೆÇಲೀಸ್ ಸಿಬ್ಬಂದಿ ಸಮ್ಮುಖದಲ್ಲಿಯೇ ಮತ್ತೊಬ್ಬ ಯುವಕನ ಮೇಲೂ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕಾನೂನು-ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಮಾದಿಗ ದಂಡೋರ ಸಂಘಟನೆಯ ತಾಲೂಕು ಅಧ್ಯಕ್ಷ ರವಿ ಬುರನೋಳ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಪ್ರಕರಣದ ಕುರಿತು ಸಂಪೂರ್ಣ ವಿವರಗಳನ್ನು ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ರಾತ್ರಿ ತಡವಾಗಿ, ಬೆಳಗ್ಗೆ ಸುಮಾರು 3 ಗಂಟೆಯ ವೇಳೆಗೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣವನ್ನು ಖಂಡಿಸಿದ ರವಿ ಬುರನೋಳ್, “ಜಾತಿ ದ್ವೇಷದ ಮನೋಭಾವದಿಂದ ನಡೆಯುವ ಇಂತಹ ಅಮಾನುಷ ಕೃತ್ಯಗಳು ಸಮಾಜದ ಸೌಹಾರ್ದತೆಯನ್ನು ಹಾಳುಮಾಡುತ್ತವೆ. ಆರೋಪಿಗಳ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರು ಕೂಡ ಘಟನೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.






















