Home ಜಿಲ್ಲೆ ಕಡೇಚೂರು ಭೂ ಸ್ವಾಧೀನ ಹಿಂತೆಗೆತಕ್ಕೆ ಹರ್ಷ: ಶ್ರೀದೇವಿ ಶೆಟ್ಟಿಹಳ್ಳಿ ಸ್ವಾಗತ

ಕಡೇಚೂರು ಭೂ ಸ್ವಾಧೀನ ಹಿಂತೆಗೆತಕ್ಕೆ ಹರ್ಷ: ಶ್ರೀದೇವಿ ಶೆಟ್ಟಿಹಳ್ಳಿ ಸ್ವಾಗತ

ಯಾದಗಿರಿ:ಮಾ.೨೨: ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಎರಡನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಹಿಂತೆಗೆದುಕೊAಡಿರುವ ಕ್ರಮಕ್ಕೆ ಸ್ಥಳೀಯರಲ್ಲಿ ಸಂತಸ ವ್ಯಕ್ತವಾಗಿದ್ದು, ಈ ನಿರ್ಧಾರ ರೈತರ ಹಿತಾಸಕ್ತಿಗೆ ದೊಡ್ಡ ಬಲ ನೀಡಿದಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಶ್ರೀದೇವಿ ಶೆಟ್ಟಿಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಮಾತನಾಡಿದ ಅವರು, ಈ ಮಹತ್ವದ ತೀರ್ಮಾನ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ತಂದು, ರೈತರ ಪರ ನಿಂತ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಪೂರ ಹಾಗೂ ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರ ಪಾತ್ರ ಶ್ಲಾಘನೀಯವಾಗಿದೆ ಎಂದು ಹೇಳಿದರು.

“ಕಡೇಚೂರು-ಬಾಡಿಯಾಳ ಭಾಗದ ಅನೇಕ ರೈತರು ಆರಂಭದಲ್ಲಿ ಸರಿಯಾದ ಮಾಹಿತಿ ಇಲ್ಲದೆ ತಮ್ಮ ಜಮೀನನ್ನು ಕೈಗಾರಿಕಾ ಉದ್ದೇಶಗಳಿಗೆ ಒಪ್ಪಿಸಿದ್ದಾರೆ. ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿದ್ದರೂ, ವಾಸ್ತವದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿಲ್ಲ. ಇದರಿಂದ ಜೀವನೋಪಾಯ ಕಳೆದುಕೊಂಡ ಹಲವರು ಬೆಂಗಳೂರು, ಮುಂಬೈ ಮೊದಲಾದ ಮಹಾನಗರಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಇದರಿಂದಾಗಿ ಸ್ಥಳೀಯರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಎರಡನೇ ಹಂತದ ಭೂ ಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆ ಸರ್ಕಾರ ಭೂ ಸ್ವಾಧೀನವನ್ನು ಕೈಬಿಟ್ಟಿರುವುದು ರೈತರ ಸಂಕಷ್ಟಕ್ಕೆ ಸ್ಪಂದಿಸಿದ ನಿರ್ಧಾರವಾಗಿದ್ದು, ಇದನ್ನು ಸ್ವಾಗತಿಸುತ್ತೇನೆ ಎಂದು ಶ್ರೀದೇವಿ ಹೇಳಿದರು.

“ಈ ನಿರ್ಧಾರ ರೈತರ ಬದುಕಿಗೆ ಆಶಾಕಿರಣವಾಗಿದ್ದು, ನಮ್ಮ ಭಾಗದ ಜನರ ಪರವಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ.