
ಯಾದಗಿರಿ:ಮಾ.೨೨: ಹುರಸಗುಂಡಗಿ-ದೋರನಹಳ್ಳಿ ಸಂಪರ್ಕ ರಸ್ತೆಯಲ್ಲಿ ಹಾದು ಹೋಗಿರುವ ಸೂರತ್-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಸುರಂಗ ಮಾರ್ಗ ರೈತರಿಗೆ ಸಂಕಷ್ಟದ ಕಿಡಿಯಾಗಿದ್ದು, ಎತ್ತರದ ಕೊರತೆ ಹಾಗೂ ಮೂಲಭೂತ ಸೌಲಭ್ಯಗಳ ಅಭಾವದಿಂದ ಕೃಷಿ ಉತ್ಪನ್ನಗಳ ಸಾಗಣೆ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ.
ಬಿದರಾಣಿ-ಹುರಸಗುAಡಗಿ ಮಧ್ಯದಲ್ಲಿರುವ ಈ ಸುರಂಗ ಮಾರ್ಗವು ಕಡಿಮೆ ಎತ್ತರದಲ್ಲಿರುವುದರಿಂದ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಸಾಗಿಸುವ ಟ್ರ್ಯಾಕ್ಟರ್ಗಳು ಮತ್ತು ವಾಹನಗಳು ಸುಲಭವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಕಳೆದ ಒಂದು ವರ್ಷದಿಂದ ರೈತರು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಪರದಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೊಂದೆಡೆ, ಮಳೆಗಾಲದಲ್ಲಿ ಸುರಂಗದ ಒಳಭಾಗದಲ್ಲಿ ನೀರು ತುಂಬಿ ನಿಲ್ಲುವುದರಿಂದ ಸಂಚಾರಕ್ಕೆ ದೊಡ್ಡ ಅಡಚಣೆ ಉಂಟಾಗುತ್ತಿದೆ. ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ರಸ್ತೆ ನೀರಿನ ಕೆರೆಗೆ ತಿರುಗುತ್ತಿದ್ದು, ವಾಹನ ಸಂಚಾರವೇ ಅಪಾಯಕರವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸಮಸ್ಯೆಗಳ ವಿರುದ್ಧ ಆಕ್ರೋಶಗೊಂಡ ರೈತರು ಹಾಗೂ ಗ್ರಾಮಸ್ಥರು ರಸ್ತೆ ನಿರ್ಮಾಣ ಕಂಪನಿಗಳಾದ ನಾಗಾರ್ಜುನ ಸೇರಿದಂತೆ ಸಂಬAಧಿತ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ತಕ್ಷಣ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಗೆ ಸ್ಪಂದಿಸಿದ ಹೆದ್ದಾರಿ ಇಲಾಖೆಯ ಇಂಚಾರ್ಜ್ ನಾಗಾರ್ಜುನ ಹಾಗೂ ಉಸ್ತುವಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. “ಒಂದು ವಾರದೊಳಗೆ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಸಂಚಾರ ಸುಗಮವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗುಂಡಳಿಯ ರೈತ ಸಂಘದ ಸದಸ್ಯರಾದ ಮರೆಪ್ಪ, ತಾಯಪ್ಪ, ರವಿ (ಇಬ್ರಾಹಿಂಪುರ), ರಾಮಚಂದ್ರ (ಬಿದರಾಣಿ) ಸೇರಿದಂತೆ ಹಲವರು ಉಪಸ್ಥಿತರಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು. ಸಕ್ರಪ್ಪ ಮೇಲಾಗಿರಿ, ವೆಂಕಟೇಶ್ ನಾಲ್ವರ್, ಭಾಗರೆಡ್ಡಿ ರಸ್ತಾಪುರ, ದೇವು ತುಕ್ಕನರ, ಸಾಬಣ್ಣ ನಾಲ್ವರ್, ಶಿವು ನರಸನರ, ಸಿದ್ದು ಅಲ್ಲೂರು, ಶೇಖರ ಮೇಲಾಗಿರಿ, ವಿಶ್ವಪಂಡಿತ್ ಸೇರಿದಂತೆ ಅನೇಕರು ಭಾಗವಹಿಸಿ ರೈತರ ಸಂಕಷ್ಟವನ್ನು ಅಧಿಕಾರಿಗಳ ಗಮನಕ್ಕೆ ತಂದರು.






















