
ಸಂಜೆವಾಣಿ ವಾರ್ತೆ
ಕೆಂಭಾವಿ:ಮಾ.೨೨:ಪ್ರೀತಿ ಮತ್ತು ಸೇವೆಯಲ್ಲಿ ನಿಸ್ವಾರ್ಥ ಇರಬೇಕು. ನಿಸ್ವಾರ್ಥದಿಂದ ಮಾತ್ರ ಸಕಲ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ ಎಂದು ಆರ್ಟ್ ಆಫ್ ಲೀವಿಂಗ್‌ನ ಗುರುಜಿ ಸತ್ಯಂ ಹೇಳಿದರು.
ಪಟ್ಟಣದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಆರ್ಟ್ ಆಫ್ ಲೀವಿಂಗ್ ವತಿಯಿಂದ ಹಮ್ಮಿಕೊಂಡಿದ್ದ ಸಂತೋಷದ ಅನುಭೂತಿ (ಹ್ಯಾಪಿನೆಸ್ ಪ್ರೋಗ್ರಾಂ) ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು. ದೈನಂದಿನ ಬದುಕಿನಲ್ಲಿ ಜನರು ಆರೋಗ್ಯದ ಕಡೆಗೆ ಗಮನ ಕೊಡುತ್ತಿಲ್ಲ. ಆರೋಗ್ಯವೆ ಭಾಗ್ಯ ಎನ್ನುವದನ್ನು ಮರೆತು ಹೋಗುತ್ತಿದ್ದಾರೆ. ದೇಹದ ಜೊತೆಗೆ ಮನಸ್ಸನ್ನು ಶುದ್ಧಿಗೊಳಿಸಲು ಶ್ರೀ ರವಿಶಂಕರ ಗುರುಜಿಯವರು ಸುದರ್ಶನ ಕ್ರಿಯೆಯನ್ನು ಜಗತ್ತಿನಾದ್ಯಂತ ಪ್ರಚುರಗೊಳಿಸಿದರು. ಆರ್ಟ್ ಆಫ್ ಲೀವಿಂಗ್ ವತಿಯಿಂದ ದೇಹ, ಮನಸ್ಸು, ಬುದ್ದಿ ಹಾಗೂ ಪ್ರಾಣದ ಕಡೆಗೆ ಹೇಗೆ ಹೆಚ್ಚು ಗಮನ ಕೊಡಬಹುದು ಎಂದು ತಿಳಿಸಲಾಗುತ್ತದೆ. ಪಟ್ಟಣದ ಯುವಕರು ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ರೀತಿಯಲ್ಲಿ ಸಹಕರಿಸುತ್ತಿರುವದು ಉತ್ತಮ ಬೆಳವಣಿಗೆ ಎಂದರು.
ಆರ್ಟ್ ಆಫ್ ಲೀವಿಂಗ್ ಯಾದಗಿರಿ ಜಿಲ್ಲೆಯ ಪ್ರಮುಖರಾಗಿರುವ ಎಸ್.ಎಚ್.ರೆಡ್ಡಿ ಅವರು ಮಾತನಾಡಿ, ದಿನದ ಒಂದಿಷ್ಟು ಸಮಯ ನಮಗಾಗಿ ಸಮಯವನ್ನು ಮೀಸಲಿಡಬೇಕು. ಯೋಗ, ಪ್ರಾಣಾಯಾಮ ಸೇರಿದಂತೆ ಕೆಲಹೊತ್ತು ದೈಹಿಕ ಕಸರತ್ತು ನಡೆಸಬೇಕು. ಆರ್ಟ್ ಆಫ್ ಲೀವಿಂಗ್ ವತಿಯಿಂದ ಮನಸ್ಸನ್ನು ಶಾಂತಗೊಳಿಸಿ, ಆಂತರಿಕ ಸಮತೋಲನವನ್ನು ಹೆಚ್ಚಿಸುವ ಅನೇಕ ಮಾರ್ಗಗಳನ್ನು ತಿಳಿಸಿ ಕೊಡಲಾಗುತ್ತದೆ. ಆಧ್ಯಾತ್ಮದಿಂದ ಮಾತ್ರ ನಾವು ಮನಸ್ಸನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮೋಹನರೆಡ್ಡಿ ಡಿಗ್ಗಾವಿ, ರಾಜಶೇಖರಯ್ಯ ಹಿರೇಮಠ, ನಾಗೇಶ್ವರರಾವ, ಕವಿತಾ, ನವೀನ, ಶರಣಗೌಡ ಪಾಟೀಲ, ಡಿ.ಸಿ.ಪಾಟೀಲ, ರಮೇಶ ಸೊನ್ನದ, ಆಂಜನೇಯ, ರೇವಣಸಿದ್ದಯ್ಯ, ದೇವು ಯಾಳಗಿ, ಸತೀಶ, ಸಿಎಚ್ ಶ್ರೀನಿವಾಸ ಸೇರಿದಂತೆ ಇತರರಿದ್ದರು.






















