
ಯಾದಗಿರಿ:ಮಾ.21: ಜಿಲ್ಲೆಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ಬಾಚ್ಚವಾರ ಗ್ರಾಮದಲ್ಲಿ ಈ ಚಟುವಟಿಕೆಗಳು ತೀವ್ರವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಮನವಿಯಲ್ಲಿ ಉಲ್ಲೇಖಿಸಿದಂತೆ, ಗ್ರಾಮಾಂತರ ಪ್ರದೇಶಗಳ ಅರಣ್ಯ ಭೂಮಿಯಲ್ಲಿ ಅನಧಿಕೃತವಾಗಿ ಮರಳು ತೆಗೆಯಲಾಗುತ್ತಿದ್ದು, ಟ್ರ್ಯಾಕ್ಟರ್ಗಳ ಮೂಲಕ ರಾತ್ರಿ ವೇಳೆಗಳಲ್ಲಿ ಸಾಗಾಣಿಕೆ ಜೋರಾಗಿ ನಡೆಯುತ್ತಿದೆ. ಇದರಿಂದ ಪರಿಸರ ಹಾನಿಯ ಜೊತೆಗೆ ಅರಣ್ಯ ಸಂಪತ್ತಿಗೂ ಗಂಭೀರ ಅಪಾಯ ಎದುರಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮುಂದಾದ ಸ್ಥಳೀಯ ರೈತ ಭೀಮರಾಯ ಬಡಿಗೇರ ಅವರಿಗೆ ಅರಣ್ಯ ಇಲಾಖೆ ಅಧಿಕಾರಿ ಪವನ್ ಕುಮಾರ್ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. “ಪ್ರಕರಣ ಹಿಂಪಡೆಯದಿದ್ದರೆ ನಿನ್ನ ಮೇಲೆ ಕೇಸ್ ಹಾಕುತ್ತೇನೆ, ನೋಡೋಣ ಏನು ಮಾಡ್ತೀನಿ” ಎಂದು ಅವಾಚ್ಯ ಶಬ್ದಗಳಲ್ಲಿ ಬೆದರಿಕೆ ಹಾಕಿರುವುದಾಗಿ ಭೀಮರಾಯ ಆರೋಪಿಸಿದ್ದಾರೆ.
ಇದೇ ಅಧಿಕಾರಿ ಸುಮಾರು ಒಂದು ತಿಂಗಳ ಹಿಂದೆ ಮತ್ತೊಬ್ಬ ವ್ಯಕ್ತಿಗೂ ಕರೆಮೂಲಕ ಬೆದರಿಕೆ ಹಾಕಿ, ಹತ್ರಿಕುಣಿ ಮಾರ್ಗದಲ್ಲಿ ಅವಾಚ್ಯವಾಗಿ ನಿಂದಿಸಿರುವ ಘಟನೆ ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಯಗಾಪುರ ಗ್ರಾಮದ ರಾಮಣ್ಣ ಮೊಟ್ನಳ್ಳಿ ಎಂಬ ರೈತನಿಗೆ “ಇದು ಗೋಮಾಳ/ಬಂಜಾರ ಭೂಮಿ” ಎಂದು ಹೇಳಿ, ಅರಣ್ಯ ಇಲಾಖೆ ಸಿಬ್ಬಂದಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ರೈತನಿಂದ ಸುಮಾರು ?1 ಲಕ್ಷದವರೆಗೆ ಹಣ ಕಿತ್ತುಕೊಂಡಿರುವುದಾಗಿ ದೂರಲಾಗಿದೆ.
ಘಟನೆ ಸಂಬಂಧ ಭೀಮರಾಯ ಅವರು ವಿಡಿಯೋ ದಾಖಲಿಸಿಕೊಂಡ ಬಳಿಕ, ಸಂಬಂಧಿತ ಅಧಿಕಾರಿಗಳು ಸ್ಥಳದಿಂದ ತೆರಳಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ರಾತ್ರಿ ವೇಳೆಗಳಲ್ಲಿ ಸಾಗಾಣಿಕೆಯಿಂದ ಶಬ್ದ ಮಾಲಿನ್ಯ ಮತ್ತು ರಸ್ತೆ ಹಾನಿ ಸಮಸ್ಯೆಗಳು ಹೆಚ್ಚಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.
ಈ ಕುರಿತು ರಾಜ್ಯದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಸಚಿವರಾದ ಈಶ್ವರ್ ಬಿ. ಖಂಡ್ರೆ ಅವರಿಗೆ ಸಹ ಮನವಿ ಸಲ್ಲಿಸಲಾಗಿದೆ ಎಂದು ಭೀಮರಾಯ ಬಡಿಗೇರ ಅವರು ಪತ್ರಕರ್ತರ ಮುಂದೆ ತಿಳಿಸಿದ್ದಾರೆ.
ಹೀಗಾಗಿ, ಅರಣ್ಯ ಇಲಾಖೆ ತಕ್ಷಣ ವಿಶೇಷ ದಾಳಿ ನಡೆಸಿ, ವಿಶೇಷವಾಗಿ ಬಾಚ್ಚವಾರ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅರಣ್ಯ ಪ್ರದೇಶಗಳಲ್ಲಿ ನಿರಂತರ ನಿಗಾವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.






















