
ಯಾದಗಿರಿ:ಮಾ.೧೪:ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡ ಪ್ರದೇಶಗಳಿಗೆ ಹಜ್ ಭವನ ಮಂಜೂರು ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕೆಪಿಸಿಸಿ ರಾಜ್ಯ ಸಂಯೋಜಕ ರಾಜ್ ಮೈನುದ್ದೀನ್ ಎಂ. ಜಮಾದಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಸರ್ಕಾರದ ಈ ನಿರ್ಧಾರಕ್ಕೆ ಉತ್ತರ ಕರ್ನಾಟಕಕ್ಕೆ ಮಹತ್ವದ ಕೊಡುಗೆ ನೀಡಲು ಶ್ರಮಿಸಿದ ಹಾಗೂ ಪ್ರಮುಖ ಪಾತ್ರವಹಿಸಿದ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದುವರೆಗೆ ಹಜ್ ಯಾತ್ರೆಗೆ ತೆರಳುವ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರ ಕಡೆಗೆ ತೆರಳಿ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತಿತ್ತು. ಆದರೆ ಈ ಸಮಸ್ಯೆಯನ್ನು ಮನಗಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಇದೀಗ ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ನಗರಗಳಲ್ಲಿ ಹಜ್ ಭವನ ಮಂಜೂರಾಗಿರುವುದು ಉತ್ತರ ಕರ್ನಾಟಕದ ಮುಸ್ಲಿಂ ಸಮುದಾಯಕ್ಕೆ ದೊಡ್ಡ ಸಂತಸದ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.
ಹಜ್ ಭವನ ನಿರ್ಮಾಣದಿಂದ ಉತ್ತರ ಕರ್ನಾಟಕ ಭಾಗದ ಯಾತ್ರಿಕರಿಗೆ ಹಜ್ ಯಾತ್ರೆಯ ಸಿದ್ಧತೆ ಹಾಗೂ ಅಗತ್ಯ ವ್ಯವಸ್ಥೆಗಳನ್ನು ಸ್ಥಳೀಯವಾಗಿ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.






















