
ಯಾದಗಿರಿ,ಮಾ.೧೨-ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಸರ್ಕಾರಿ ಉರ್ದು ಶಾಲೆ ಮತ್ತು ಗುಡ್ಡದ ಗುರುಲಿಂಗೇಶ್ವರ ಬಡಾವಣೆಯ ಸರ್ಕಾರಿ ಶಾಲೆ, ಉಳಿಸಲು ಪೋಷಕರು ಮತ್ತು ಗ್ರಾಮಸ್ಥರು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಲಕ್ಕಪ್ಪ ಅವರು ಮಾತನಾಡುತ್ತಾ, ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಯನ್ನು ತೆರೆಯುವ ಮೂಲಕ ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗೆ ಒಂದೇ ಶಾಲೆ ಪ್ರಾರಂಭಿಸಿ, ರಾಜ್ಯದಲ್ಲಿ ೪೦,೦೦೦ ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಡ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಈ ದೇಶದಲ್ಲಿ ಹಲವಾರು ಮಹಾನ್ ವ್ಯಕ್ತಿಗಳ ಹೋರಾಟದ ಮೂಲಕ ಶಿಕ್ಷಣ ಬಂದಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯು ಶಿಕ್ಷಣವನ್ನು ಕೇವಲ ಕೆಲವರ ಸ್ವತ್ತನ್ನಾಗಿಸುತ್ತದೆ. ಒಂದೆಡೆ, ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳುವ ಶಿಕ್ಷಣ ಸಚಿವರು ಇನ್ನೊಂದೆಡೆ ಶಾಲೆಗಳನ್ನು ಮುಚ್ಚುವ ಸುಸ್ಪಷ್ಟ ಆದೇಶವನ್ನು ಇಲಾಖೆಯಿಂದ ಹೊರಡಿಸಿದ್ದಾರೆ.
ಮುಂದುವರೆದು ಮಾತನಾಡುತ್ತ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ಇರುವ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ನಿಧಿಯನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಸ್ಥಾಪನೆಗಾಗಿ ಬಳಸಲಾಗುತ್ತಿದೆ. ಇಲ್ಲಿಯ ಜನರಿಗೆ ಆಸ್ಪತ್ರೆಗಳು ಉದ್ಯೋಗ ಸೃಷ್ಟಿಸುವುದು ಇಲ್ಲಿಯ ಜನರ ಜೀವನ ಮಟ್ಟವನ್ನು ಮೇಲೆತ್ತಲು ಬಳಸಬೇಕಾದ ಈ ಹಣವನ್ನು ಸರ್ಕಾರಿ ಶಾಲೆ ಮುಚ್ಚಲು ಬಳಸುತ್ತಿರುವುದು ಖಂಡನೀಯ ಎಂದರು.
ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳು ನೇರವಾಗಿ ಹೋಗಿ ಮನೆಗೆ ಬರುತ್ತಾರೆ, ಈಗ ಈ ವ್ಯವಸ್ಥೆಯನ್ನು ಬದಲಾಯಿಸಿ ಕರ್ನಾಟಕ ಪಬ್ಲಿಕ್ ಶಾಲೆ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವುದು ಸರಿಯಲ್ಲ. ನಾವು ಕೂಲಿ ಮಾಡಿ ಜೀವನ ನಡೆಸುವ ಮಂದಿ ನಮ್ಮ ಮಕ್ಕಳನ್ನು ಅಷ್ಟು ದೂರ ಕಳುಹಿಸಲು ಆಗುವುದಿಲ್ಲ ನಮ್ಮೂರಿನ ಸರ್ಕಾರಿ ಶಾಲೆ ನಮ್ಮೂರಿನಲ್ಲೇ ಇರಲಿ ಎಂದು ಘೋಷನೆಗಳನ್ನು ಕೂಗುತ್ತಾ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭಾಶಾ ಸಾಬ್, ಹಸನ್ ಸಾಬ್, ಅದ್ಬುಲ್ ರಹಿಮ್ ಸಾಬ್, ರಹೀಮ್ ಸಾಬ್, ತಿರುಪತಿ, ಹೊನ್ನಪ್ಪ, ಹಣಮಂತರಾಯ, ಸಿದ್ದಣ್ಣ ಹಳ್ಳಿ, ಮಾಲಮ್ಮ, ಶಿವರಾಜ್, ಸಿದ್ದಣ್ಣ, ಗುರುನಾಥ, ದೇವಿಂದ್ರ, ಭಾಗ್ಯಮ್ಮ ಸೇರಿದಂತೆ ಅನೇಕ ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.






















