
ಯಾದಗಿರಿ: ಮಾ.೧೨:ಜಿಲ್ಲೆಯಲ್ಲಿ ದಿನೇದಿನೇ ಹೆಚ್ಚುತ್ತಿರುವ ಉಷ್ಣತೆಯ ಅಬ್ಬರದಿಂದ ಜನಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮಧ್ಯಾಹ್ನ ವೇಳೆಯಲ್ಲಿ ನಗರದಲ್ಲಿ ಸಂಚರಿಸುವುದು ಜನರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸೂರ್ಯನ ಉರಿಯುವ ಕಿರಣಗಳು ಜನರನ್ನು ನಲುಗಿಸುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡುವುದು ನಗರ ಆಡಳಿತದ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಬಿಜೆಪಿ ಮಾಜಿ ನಗರ ಮಂಡಲ ಅಧ್ಯಕ್ಷ ಮಂಜುನಾಥ್ ಜಡಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಜಂಕ್ಷನ್‌ಗಳಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ಉರಿಯುತ್ತಿರುವ ಬಿಸಿಲಿನ ನಡುವೆ ದೀರ್ಘ ಕಾಲ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ತಲೆಸುತ್ತು, ದೇಹದ ದೌರ್ಬಲ್ಯ, ನಿರ್ಜಲೀಕರಣ ಸೇರಿದಂತೆ ಹೀಟ್ ಸ್ಟ್ರೋಕ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಎಚ್ಚರಿಸಿದರು.
ಈ ಹಿನ್ನೆಲೆ ನಗರ ಪೌರಾಯುಕ್ತರು ಹಾಗೂ ನಗರಸಭೆ ಆಡಳಿತ ತಕ್ಷಣ ಕಾರ್ಯಪ್ರವೃತ್ತರಾಗಿ ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಜನಸಂದಣಿ ಹೆಚ್ಚಿರುವ ಜಂಕ್ಷನ್‌ಗಳಲ್ಲಿ ನೆರಳು ಒದಗಿಸುವ ಉದ್ದೇಶದಿಂದ ಹಸಿರು ಷೇಡ್ ನೆಟ್ ಅಥವಾ ತಾತ್ಕಾಲಿಕ ಶೆಡ್ ವ್ಯವಸ್ಥೆ ಅಳವಡಿಸುವಂತೆ ಅವರು ಒತ್ತಾಯಿಸಿದರು. ಇಂತಹ ವ್ಯವಸ್ಥೆಗಳಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಬಿಸಿಲಿನ ತೀವ್ರತೆಯಿಂದ ಸ್ವಲ್ಪ ಮಟ್ಟಿಗೆ ರಕ್ಷಣೆ ಪಡೆಯಲಿದ್ದು, ಸಂಚಾರದಲ್ಲಿಯೂ ಅನುಕೂಲವಾಗಲಿದೆ ಎಂದು ಹೇಳಿದರು.
ಇದಕ್ಕೂ ಜೊತೆಗೆ ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಪ್ರಮುಖ ಮಾರುಕಟ್ಟೆ ಪ್ರದೇಶಗಳು, ಸರ್ಕಾರಿ ಕಚೇರಿಗಳ ಮುಂಭಾಗ ಹಾಗೂ ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ತುರ್ತಾಗಿ ಪ್ರಾರಂಭಿಸಬೇಕಾಗಿದೆ. ಸಾರ್ವಜನಿಕರಿಗೆ ಸುಲಭವಾಗಿ ಕುಡಿಯುವ ನೀರು ದೊರೆಯುವಂತೆ ತಾತ್ಕಾಲಿಕ ನೀರಿನ ಕೇಂದ್ರಗಳನ್ನು ಸ್ಥಾಪಿಸುವುದು ಕಾಲದ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಗರದ ವಿವಿಧ ಪ್ರದೇಶಗಳಲ್ಲಿ ಈಗಾಗಲೇ ಇರುವ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ, ಅವುಗಳ ನಿರ್ವಹಣೆಗೆ ವಿಶೇಷ ತಂಡವನ್ನು ನಿಯೋಜಿಸಬೇಕು ಎಂದು ಕೂಡ ಅವರು ಸಲಹೆ ನೀಡಿದರು.
ತೀವ್ರ ಬಿಸಿಲಿನ ಹೊಡೆತದಿಂದ ಜನರು ಸಂಕಷ್ಟಕ್ಕೆ ಒಳಗಾಗುತ್ತಿರುವ ಸಂದರ್ಭದಲ್ಲಿ ನಗರ ಆಡಳಿತವು ಮಾನವೀಯ ದೃಷ್ಟಿಕೋನದಿಂದ ಸ್ಪಂದಿಸಿ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆದ್ದರಿಂದ ನಗರ ಪೌರಾಯುಕ್ತರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯ ಕ್ರಮಗಳನ್ನು ಜಾರಿಗೆ ತರಬೇಕೆಂದು ಮಂಜುನಾಥ್ ಜಡಿ ಆಗ್ರಹಿಸಿದ್ದಾರೆ.






















