Home ಜಿಲ್ಲೆ ದಿ. 14ರಂದು ಪ್ರತಿಭಟನೆ

ದಿ. 14ರಂದು ಪ್ರತಿಭಟನೆ

ರಬಕವಿ-ಬನಹಟ್ಟಿ,ಮಾ.12: ಸಿಎಂ ಸಿದ್ಧರಾಮಯ್ಯ ದಿ.6ರಂದು ರಾಜ್ಯದ ಬಜೆಟ್ ಮಂಡಿಸಿದ್ದು, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಹಲವಾರು ಬಾರಿ ನೇಕಾರರೊಡನೆ ಸಭೆ ನಡೆಸಿ, ಉದ್ಯಮ ರಕ್ಷಣೆಗೆ ಅಗತ್ಯ ಯೋಜನೆಗಳ ರೂಪಿಸಲು ನೆರವಾಗಲು ಕೈಮಗ್ಗ ಮತ್ತು ಜವಳಿ ಇಲಾಖೆಗೆ ರು.1500 ಕೋಟಿ ಅನುದಾನ ಮೀಸಲಿಡಲು ಆಗ್ರಹಿಸಿದ್ದರೂ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಗೌಣವಾಗಿಸಿದ್ದನ್ನು ಖಂಡಿಸಿ ದಿ.14ರಂದು ಪ್ರತಿಭಟನೆ ನಡೆಸಲಾಗುತ್ತದೆಂದು ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಎಚ್ಚರಿಸಿದರು.


ನೇಕಾರರಿಗೆ ಶೇ.0, ಶೇ.3ರ ಬಡ್ಡಿ ದರದಡಿ ನೀಡುತ್ತಿದ್ದ ಸಾಲ, ಸಹಾಯಧನದ ಮೊತ್ತವನ್ನು ರೂ.1 ಲಕ್ಷದಿಂದ ರೂ.2 ಲಕ್ಷಕ್ಕೆ ಏರಿಸಬೇಕು. 3-4 ವರ್ಷಗಳಿಂದ ನೇಕಾರರು ಸಹಕಾರಿ ಸಂಘಗಳಲ್ಲಿ ಪಡೆದ ಸಾಲದ ಬಡ್ಡಿ ಹಣ ಮರು ಪಾವತಿಸದ ಸರ್ಕಾರದ ಕ್ರಮದಿಂದ ಹೊಸ ಸಾಲ ಪಡೆಯಲಾಗುತ್ತಿಲ್ಲ. ತಂತ್ರಾಂಶದ ವೈಫಲ್ಯ ಹಾಗೂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸಾಲದ ಮತ್ತು ಬಡ್ಡಿಯ ಮೊತ್ತ ಮಿತಿಮೀರಿದ್ದು ನೇಕಾರರು ತಮ್ಮ ಮಗ್ಗಗಳನ್ನು ಮಾರಿದರೂ ಸಾಲದಂತಿದ್ದು, ತಕ್ಷಣ ಸರ್ಕಾರ ಒಂದು ಬಾರಿ ನೇಕಾರರ ಸಾಲಮನ್ನಾ ಮಾಡಬೇಕು. ನಿಗಮದಲ್ಲಿ ಖಾಲಿಯಿರುವ 55 ಹುದ್ದೆಗಳ ಭರ್ತಿಗೊಳಿಸಬೇಕು. ಬೆಳಗಾವಿ ಮತ್ತು ಬೆಂಗಳೂರಲ್ಲಿ ನಡೆಸಿದ ಹೋರಾಟ, ಪ್ರತಿಭಟನೆಗೆ ಮಣೆ ಹಾಕದೇ ರಾಜ್ಯಸರ್ಕಾರ ನೇಕಾರರನ್ನು ಕಡೆಗಣೆಸಿದೆ. ತಕ್ಷಣ ಮುಖ್ಯಮಂತ್ರಿಗಳು ನೇಕಾರರೊಡನೆ ಸಭೆ ನಡೆಸಿ ನಮ್ಮ ಬೇಡಿಕೆಗಳಾದ ರಾಜ್ಯದ ವೃತ್ತಿಪರ ನೇಕಾರರ ಅಂಕಿ-ಸಂಖ್ಯೆಗಳನ್ನು ಖಚಿತವಾಗಿ ದಾಖಲಿಸಬೇಕು. ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕ ಮಾದರಿಯ ಸೌಲಭ್ಯಗಳನ್ನು ಒದಗಿಸಿ ಗುರುತಿನ ಚೀಟಿ ಶೀಘ್ರ ವಿತರಿಸಬೇಕು. 55 ವರ್ಷ ಮೇಲ್ಪಟ್ಟ ನೇಕಾರರಿಗೆ ಮಾಸಿಕ ರು.5 ಸಾವಿರ ಮಾಸಾಶನ ಜಾರಿಗೊಳಿಸಬೇಕು. ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ ರಾಜ್ಯದ 55 ನೇಕಾರರಲ್ಲಿ ಕೇಚಲ 25 ಕುಟುಂಬಗಳಿಗೆ ಮಾತ್ರ ಪರಿಹಾರ ದೊರೆತಿದ್ದು, ಉಳಿದ ನೇಕಾರ ಕುಟುಂಬಗಳಿಗೂ ತಕ್ಷಣ ರು.10ಲಕ್ಷ ಪರಿಹಾರ ನೀಡಬೇಕು. ಚಾಲ್ತಿಯಲ್ಲಿರುವ ನೇಕಾರ ಸಮ್ಮಾನ ಯೋಜನೆಯಡಿಯ ಮೊತ್ತವನ್ನು ರು.10ಸಾವಿರಕ್ಕೇರಿಸಬೇಕು. ಯೋಜನೆಯಡಿ ವಂಚಿತ ಪ್ರಾಮಾಣಿಕ ನೇಕಾರರಿಗೂ ಸೌಲಭ್ಯ ವಿಸ್ತರಿಸಬೇಕೆಂದು ಕೋರಿ ತಹಶೀಲ್ದಾರ ಸತೀಶಕುಮಾರ ಮೂಲಕ ಸರ್ಕಾರಕ್ಕೆ ನೂರಾರು ಸಂಖ್ಯೆಯ ನೇಕಾರರು ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ರೈತ ಸಂಘದ ಧುರೀಣರಾದ ಶ್ರೀಕಾಂತ ಘೂಳನ್ನವರ, ಹೊನ್ನಪ್ಪ ಬಿರಡಿ, ಮಲ್ಲು ತುಂಗಳ, ನೇಕಾರ ಸೇವಾ ಸಂಘದ ಶಿವಲಿಂಗ ಟಿರಕಿ, ಸಂಗಪ್ಪ ಉದಗಟ್ಟಿ, ಮಲ್ಲಪ್ಪ ಮೂಲಿಮನಿ, ಕಾಡಪ್ಪ ಯಡಪ್ಪನವರ, ಬಸು ಜಮಖಂಡಿ, ಗೂಳಪ್ಪ ತುಂಗಳ, ದಾನಪ್ಪ ಯಡಪ್ಪನವರ, ಮಹಾಂತೇಶ ಖವಾಸಿ, ಈರಪ್ಪ ಭಾವಿಕಟ್ಟಿ, ಚಿದಾನಂದ ಭೂಷಣ್ಣವರ, ಶ್ರೀಕಾಂತ ಅರಳಿಕಟ್ಟಿ, ಕಾಡಪ್ಪ ಆಸಂಗಿ, ಗಂಗಪ್ಪ ಒಂಟಗೂಡಿ ಸೇರಿದಂತೆ ಅನೇಕರಿದ್ದರು.