
ಗದಗ,ಮಾ12 : ಗ್ರಾಮೀಣ ಮಟ್ಟದಲ್ಲಿ ಕೃಷಿ ಹಾಗೂ ಹೈನುಗಾರಿಕೆ ಜ್ಞಾನವನ್ನು ಮರುಸ್ಥಾಪಿಸುವಲ್ಲಿ ಕೃಷಿ ಸಖಿ’ ಮತ್ತು ‘ಪಶು ಸಖಿ’ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವಾದ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಕೃಷಿ ಸಖಿ ಮತ್ತು ಪಶು ಸಖಿಗಳ ಪ್ರಗತಿ ಪರಿಶೀಲನೆ ಹಾಗೂ ಸಂವಾದ ಕಾರ್ಯಕ್ರಮವನ್ನು” ಉದ್ಘಾಟಿಸಿ ಮಾತನಾಡಿದರು.
ಕೃಷಿ ಮತ್ತು ಪಶು ಸಖಿಯರು ಕೇವಲ ವೇತನಕ್ಕಾಗಿ ಕೆಲಸ ಮಾಡದೆ, ಹಳ್ಳಿಗಳಲ್ಲಿ ಇತರ ಮಹಿಳೆಯರು ನಿರ್ವಹಿಸದ ಜವಾಬ್ದಾರಿಗಳನ್ನು ಹೊತ್ತು ಸ್ವಯಂಪ್ರೇರಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಹೀಗಾಗಿ ಅವರ ಸೇವೆ ಸಮಾಜಕ್ಕೆ ಅತ್ಯಗತ್ಯವಾಗಿದೆ. ಹಿಂದಿನ ಕಾಲದಲ್ಲಿ ಕೃಷಿ ಮತ್ತು ಪಶುಪಾಲನೆಯು ಮಹಿಳೆಯರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿತ್ತು, ಆದರೆ ಪ್ರಸ್ತುತ ದಿನಗಳಲ್ಲಿ ಆ ಜ್ಞಾನ ಮರೆಯಾಗುತ್ತಿದ್ದು, ಅದನ್ನು ಮರುನೆನಪಿಸುವ ಕೆಲಸವನ್ನು ಸಖಿಯರು ಮಾಡಬೇಕಿದೆ ಎಂದರು.
“ನಮಗೆಲ್ಲವೂ ಗೊತ್ತಿದೆ” ಎಂಬ ಅಹಂಕಾರವನ್ನು ಬಿಟ್ಟು, ಹೊಸ ವಿಚಾರಗಳನ್ನು ಕಲಿಯುವತ್ತ ಗಮನಹರಿಸಬೇಕು”ನಿಂತ ನೀರಾಗಿ ಕೊಳೆಯುವ ಬದಲು, ನಿರಂತರವಾಗಿ ಬದಲಾಗುತ್ತಾ, ಸುಧಾರಣೆಗೊಳ್ಳಬೇಕು” ಎಂದು ಕರೆ ನೀಡಿದರು.”ಗುರು ಇದ್ದರೆ ಗುರಿ” ಎಂಬ ಮಾತಿನಂತೆ, ಪ್ರತಿಯೊಂದು ಹಂತದಲ್ಲೂ ಗ್ರಾಮೀಣ ಮಹಿಳೆಯರಿಗೆ ಮಾರ್ಗದರ್ಶನ ನೀಡುವ ಗುರುವಿನ ಸ್ಥಾನದಲ್ಲಿ ಸಖಿಯರು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎಂ.ವಿ.ಚಳಗೇರಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಹುಲಗಣ್ಣವರ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಘುನಾಥಗೌಡ ಪಾಟೀಲ್, ಕೃಷಿ ಮತ್ತು ಪಶುಸಖಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಬಸವರಾಜ ಮೂಲಿಮನಿ ಕಾರ್ಯಕ್ರಮ ನಿರೂಪಿಸಿದರು.






















