
ಲಕ್ಷ್ಮೇಶ್ವರ,ಮಾ10: ಲಕ್ಷ್ಮೇಶ್ವರ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಹಿಂದುಳಿದಿದ್ದು ಇಲ್ಲಿನ ಜನರು ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನರಳುತ್ತಿದ್ದಾರೆ’ ಎಂದು ನಿವೃತ್ತ ಶಿಕ್ಷಕ ಹಾಗೂ ಬಿಜೆಪಿಯ ಎಸ್‍ಸಿ ಮೋರ್ಚಾದ ಜಿಲ್ಲಾ ಘಟಕದ ಮಾಜಿ ಉಪಾಧ್ಯಕ್ಷರಾದ ಪೂರ್ಣಾಜಿ ಖರಾಟೆ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದಶಕದ ಹಿಂದೆ ಪಟ್ಟಣದಲ್ಲಿ ಯುಜಿಡಿ ಯೋಜನೆಗಾಗಿ ಪೈಪ್ ಹಾಕುವ ಸಲುವಾಗಿ ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಅಗೆಯಲಾಗಿತ್ತು. ಆದರೆ ನಂತರ ದುರಸ್ತಿ ಮಾಡದ ಕಾರಣ ಇಡೀ ಊರಿನ ಸಂಪರ್ಕ ರಸ್ತೆಗಳೆಲ್ಲ ಗುಂಡಿ ಹಾಳಾಗಿವೆ. ಕೆಲ ಕಡೆಯಂತೂ ಬೈಕ್ ಸಹ ಓಡಿಸುವುದು ಸಾರ್ವಜನಿಕರಿಗೆ ಕಷ್ಟವಾಗಿದೆ. ಇನ್ನು ಪಟ್ಟಣ ದಿನದಂದ ದಿನಕ್ಕೆ ಬೆಳೆಯುತ್ತಿದ್ದು ಜನತೆಗೆ ನೀರು ಪೂರೈಸುವುದು ಪುರಸಭೆಗೆ ದೊಡ್ಡ ಸವಾಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಮೇವುಂಡಿ ನದಿ ನೀರು ಪೂರೈಕೆ ಪೈಪ್‍ಲೈನ್ ಹಳೆಯದಾಗಿದ್ದು ಅಲ್ಲಲ್ಲಿ ಪೈಪ್‍ಗಳು ಒಡೆದಿದ್ದರಿಂದ ಶೇ.30-40ರಷ್ಟು ನೀರು ವ್ಯರ್ಥವಾಗಿ ಹಾಳಾಗುತ್ತಿದೆ. ಪಟ್ಟಣಕ್ಕೆ ನೀರು ಪೂರೈಕೆಗಾಗಿ ಎರಡನೇ ಹಂತದ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಲೇ ಇದ್ದಾರೆ. ಆದರೆ ಇದುವರೆಗೆ ಅದು ಜಾರಿ ಆಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಜನತೆಗೆ ನೀರಿನ ಸಮಸ್ಯೆ ಎದುರಾಗಲಿದೆ' ಎಂದು ತಿಳಿಸಿದ ಅವರುಲಕ್ಷ್ಮೇಶ್ವರ ನೂತನ ತಾಲ್ಲೂಕು ಕೇಂದ್ರವಾಗಿ ಎಂಟು ವರ್ಷ ಕಳೆದರೂ ಕೂಡ ಇನ್ನೂ ಎಲ್ಲ ಕಚೇರಿಗಳು ಆರಂಭವಾಗಿಲ್ಲ. ಅಲ್ಲದೆ ಗದಗ-ಯಲವಗಿ ರೈಲ್ವೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಅಲ್ಲದೆ ಇಳಕಲ್ಲ-ಕೈಗಾ ರಸ್ತೆ ನಿರ್ಮಾಣ ಕೂಡ ಇನ್ನೂ ಆರಂಭವಾಗಿಲ್ಲ. ರೈಲ್ವೆ ಮಾರ್ಗ ನಿರ್ಮಾಣ ಹಾಗೂ ಇಳಕಲ್ಲ ಕೈಗಾ ರಸ್ತೆ ಕುರಿತು ಈಗಾಗಲೇ ಸಂಸದರು ದನಿ ಎತ್ತಿದ್ದರೂ ಕೂಡ ಅವು ಅನುಷ್ಠಾನಕ್ಕೆ ಬಂದಿಲ್ಲ’ ಎಂದರು.
ಒಟ್ಟಿನಲ್ಲಿ ಲಕ್ಷ್ಮೇಶ್ವರ ತಾಲ್ಲೂಕು ಅಭಿವೃದ್ಧಿ ಪಥದಿಂದ ಹಿಂದೆ ಸರಿಯುತ್ತಿದೆ. ಇದರೊಂದಿಗೆ ಇಲ್ಲಿನ ಪುರಾತನ ಇಟ್ಟಿಗೇರಿ ಕೆರೆ ನಾಲ್ಕೂ ದಿಕ್ಕಿನಿಂದ ಒತ್ತುವರಿ ಆಗಿದ್ದು ಇಡೀ ಕೆರೆಯ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ. ಕೆರೆ ಅಭಿವೃದ್ಧಿ ನೆಪದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಣ್ಣಿನ ಒಡ್ಡು ನಿರ್ಮಿಸಲಾಗಿತ್ತು. ಆದರೆ ಯಾವುದೋ ಕಾರಣಕ್ಕೆ ಹಾಕಿದ ಒಡ್ಡನ್ನು ಪುರಸಭೆಯವರು ಒಂದು ಕಡೆ ತೆರವುಗೊಳಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರಲ್ಲದೆಜನರ ತೆರಿಗೆ ದುಡ್ಡನ್ನು ಈ ರೀತಿ ಪೋಲು ಮಾಡುವುದು ತಪ್ಪು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಲಕ್ಷ್ಮೇಶ್ವರ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು’ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಿಗ್ಲಿ ಗ್ರಾಮದ ಸಾಮಾಜಿಕ ಹೋರಾಟಗಾರ ಸೋಮಣ್ಣ ಡಾಣಗಲ್ಲ ಇದ್ದರು.






















