
ಧಾರವಾಡ,ಮಾ.೮: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ೨೦೨೬-೨೭ನೇ ಸಾಲಿನ ರಾಜ್ಯ ಬಜೆಟ್ ಅತ್ಯಂತ ಆಶಾದಾಯಕವಾಗಿದ್ದು, ಇದು ಕರ್ನಾಟಕದ ಆರ್ಥಿಕ ಶಕ್ತಿಯನ್ನು ಜಗತ್ತಿಗೆ ಸಾರುವಂತಿದೆ ಎಂದು ಧಾರವಾಡ ಶಾಸಕರು ಹಾಗೂ ಮಾಜಿ ಸಚಿವರಾದ ವಿನಯ ಕುಲಕರ್ಣಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸತತ ೧೭ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಸಿದ್ದರಾಮಯ್ಯನವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ೪.೫ ಲಕ್ಷ ಕೋಟಿ ರೂಪಾಯಿ ಗಾತ್ರದ ಈ ಬೃಹತ್ ಬಜೆಟ್ ರಾಜ್ಯದ ಆರ್ಥಿಕ ಸ್ಥಿರತೆಗೆ ಸಾಕ್ಷಿಯಾಗಿದೆ.
- ಗ್ಯಾರಂಟಿ ಮತ್ತು ಅಭಿವೃದ್ಧಿಯ ಸಮನ್ವಯ: ಐದು ಗ್ಯಾರಂಟಿ ಯೋಜನೆಗಳಿಗೆ ಸಮರ್ಪಕವಾಗಿ ಹಣ ಮೀಸಲಿಡುವುದರ ಜೊತೆಗೆ, ಮೂಲಸೌಕರ್ಯ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಶ್ಲಾಘನೀಯ. ಇದು ಕೇವಲ ಅಂಕಿ-ಅAಶಗಳ ಬಜೆಟ್ ಆಗಿರದೆ, ಸಾಮಾನ್ಯ ಜನರ ಬದುಕನ್ನು ಹಸನು ಮಾಡುವ ‘ಜನಪರ ಬಜೆಟ್’ ಆಗಿದೆ.
ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಸಲು ?೫೦,೦೦೦ ಸಹಾಯಧನ ನೀಡುವ ತೀರ್ಮಾನವು ಡಿಜಿಟಲ್ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಲಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಯುವಜನತೆಗೆ ಕೌಶಲ್ಯ ತರಬೇತಿ ನೀಡುವ ಮೂಲಕ ರಾಜ್ಯದ ಭವಿಷ್ಯವನ್ನು ಉಜ್ವಲಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದ್ದಾರೆ.






















