Home ಜಿಲ್ಲೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ತತ್ವಗಳು ಸಮಾಜದ ಸಮಗ್ರ ಅಭಿವೃದ್ಧಿಗೆ ದಿಕ್ಕು ತೋರಿಸುವ ಮಾರ್ಗದರ್ಶಿ: ಶರಣಪ್ಪ...

ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ತತ್ವಗಳು ಸಮಾಜದ ಸಮಗ್ರ ಅಭಿವೃದ್ಧಿಗೆ ದಿಕ್ಕು ತೋರಿಸುವ ಮಾರ್ಗದರ್ಶಿ: ಶರಣಪ್ಪ ತಳವಾರ್

ಯಾದಗಿರಿ:ಮಾ.೮: ಭಾರತೀಯ ಜನತಾ ಪಕ್ಷದ ಸಂಘಟನಾ ಶಕ್ತಿಯನ್ನು ಬಲಪಡಿಸುವುದು ಹಾಗೂ ಕಾರ್ಯಕರ್ತರಲ್ಲಿನ ತತ್ವಚಿಂತನೆಗಳನ್ನು ಗಾಢವಾಗಿ ಬೆಳೆಸುವ ಉದ್ದೇಶದಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪ್ರಶಿಕ್ಷಣ ಅಭಿಯಾನ-೨೦೨೬ನೇ ಸಾಲಿನ ಅಂಗವಾಗಿ ಯಾದಗಿರಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ವೈಚಾರಿಕತೆ ಮತ್ತು ಸಂಘಟನಾ ಚಟುವಟಿಕೆಗಳಿಂದ ಕಂಗೊಳಿಸಿದ ಪ್ರಶಿಕ್ಷಣ ಕಾರ್ಯಗಾರವನ್ನು ಭವ್ಯವಾಗಿ ಆಯೋಜಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಬಿಜೆಪಿ ಕಲಬುರಗಿ ವಿಭಾಗದ ಸಹ ಪ್ರಭಾರಿಗಳಾದ ಶರಣಪ್ಪ ತಳವಾರ್ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಪ್ರತಿಪಾದಿಸಿದ “ಏಕಾತ್ಮ ಮಾನವತಾವಾದ” ಎಂಬ ತತ್ವವು ಭಾರತೀಯ ರಾಜಕೀಯ ಚಿಂತನೆಯಲ್ಲಿನ ಮಹತ್ತರ ದಾರಿದೀಪವಾಗಿದ್ದು, ಮಾನವ ಸಮಾಜದ ಸಮಗ್ರ ಕಲ್ಯಾಣ ಮತ್ತು ರಾಷ್ಟ್ರದ ಸಮತೋಲನ ಅಭಿವೃದ್ಧಿಗೆ ದಿಕ್ಕು ತೋರಿಸುವ ಮಹತ್ವದ ದಾರ್ಶನಿಕ ಮೌಲ್ಯಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಸಮಾಜದ ಪ್ರತಿಯೊಂದು ವರ್ಗವನ್ನು ಸಮಾನವಾಗಿ ಪರಿಗಣಿಸಿ, ಶೋಷಿತರು, ಹಿಂದುಳಿದವರು ಹಾಗೂ ವಂಚಿತ ಸಮುದಾಯಗಳ ಉನ್ನತಿಗಾಗಿ ಕಾರ್ಯನಿರ್ವಹಿಸುವುದೇ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಮಹತ್ತರ ಕನಸಾಗಿತ್ತು. ರಾಜಕೀಯವನ್ನು ಕೇವಲ ಅಧಿಕಾರ ಸಾಧನೆಯ ಸಾಧನವಾಗಿ ನೋಡುವುದಲ್ಲ; ಅದು ಸಮಾಜ ಸೇವೆಯ ಮಹೋನ್ನತ ವೇದಿಕೆಯಾಗಬೇಕು ಎಂಬುದೇ ಅವರ ದರ್ಶನವಾಗಿತ್ತು ಎಂದು ಅವರು ವಿವರಿಸಿದರು.

ಚುನಾವಣೆಯ ಸೋಲು-ಗೆಲುವುಗಳು ತಾತ್ಕಾಲಿಕವಾಗಿದ್ದು, ಜನರೊಂದಿಗೆ ಬೆಸೆಯುವ ನಂಬಿಕೆ ಮತ್ತು ಆತ್ಮೀಯತೆ ಶಾಶ್ವತವಾದದ್ದು. ಹೀಗಾಗಿ ಬಿಜೆಪಿ ಕಾರ್ಯಕರ್ತರು ಪ್ರತಿ ಬೂತ್ ಮಟ್ಟದಲ್ಲಿ ಜನರೊಂದಿಗೆ ಜೀವಂತ ಸಂಪರ್ಕ ಬೆಳೆಸಿ, ಸಂಕಷ್ಟದ ಸಂದರ್ಭಗಳಲ್ಲಿ ಅವರ ಜೊತೆಯಲ್ಲಿ ನಿಂತು ವಿಶ್ವಾಸ ಮತ್ತು ಧೈರ್ಯ ತುಂಬುವ ಕಾರ್ಯ ಮಾಡಬೇಕು. ಸಮಾಜದ ದುರ್ಬಲ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಹಾಗೂ ಅವರ ಜೀವನ ಮಟ್ಟವನ್ನು ಮೇಲಕ್ಕೆತ್ತಲು ಪಕ್ಷದ ಕಾರ್ಯಕರ್ತರು ನಿಸ್ವಾರ್ಥ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಬಸವರಾಜ ವಿಭೂತಿಹಳ್ಳಿ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಲಲಿತಾ ಅನಪುರಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಕ್ಷದ ತತ್ವಸಿದ್ಧಾಂತಗಳನ್ನು ಕಾರ್ಯಕರ್ತರು ಆಳವಾಗಿ ಅರ್ಥಮಾಡಿಕೊಂಡಾಗ ಮಾತ್ರ ಸಂಘಟನೆಯ ಬಲವರ್ಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಅಲೆಮಾರಿ ನಿಗಮದ ಅಧ್ಯಕ್ಷರಾದ ದೇವೇಂದ್ರನಾಥ ನಾಡ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಮಹೇಶ್ ರೆಡ್ಡಿ ಮುದ್ನಾಳ, ಬಿಜೆಪಿ ರಾಜ್ಯ ನಾಯಕಿ ನಾಗರತ್ನ ಕುಪ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೇಲಪ್ಪಾ ಗುಳಗಿ, ಶಿವರಾಜ್ ದೇಶಮುಖ, ಪರಶುರಾಮ ಕುರಕುಂದ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀಧರ್ ಸಾಹುಕಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ದೇವದಾಸ್ ಗುರುಮಿಟ್ಕಲ್, ಪ್ರಶಿಕ್ಷಣ ಕಾರ್ಯಾಗಾರದ ಸಂಯೋಜಕರಾದ ಗುರುಕಾಮ ವೆಂಕಟರೆಡ್ಡಿ ಅಬ್ಬೆತುಮಕೂರ, ಗ್ರಾಮೀಣ ಮಂಡಲ ಅಧ್ಯಕ್ಷರಾದ ರಾಜಶೇಖರ್ ಕಾಡಮ್ಮನೂರು, ಗೋವಿಂದಪ್ಪ ಕೊಂಚಟಿ, ನಗರ ಮಂಡಲ ಅಧ್ಯಕ್ಷರಾದ ಲಿಂಗಪ್ಪ ಅತ್ತಿಮನಿ, ನಗರ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಕಟ್ಟಿಮನಿ, ವೆಂಕಟಪ್ಪ ಅವಂಗಪುರ, ಮಲ್ಲಿಕಾರ್ಜುನ್ ಹೋನಗೆರೆ, ಜಿಲ್ಲಾ ಮಾಧ್ಯಮ ಸಹ ಸಂಚಾಲಕರಾದ ಚಂದ್ರಶೇಖರ್ ಕಡೆಸೂರು,ಪರ್ವತ್ ರೆಡ್ಡಿ, ಮೌನೇಶ್ ಬೆಳಗೆರೆ, ಬಸವರಾಜ್ ಬಳಿ, ಚಕ್ರ ಮರ್ಲಿಂಗ್ ಜಿನಿಕೆರ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಚನ್ನವೀರಯ್ಯ ಹಿರೇಮಠ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜೀವನದರ್ಶನ, ಸಂಘಟನಾ ತತ್ವಗಳು, ಬೂತ್ ಮಟ್ಟದ ಕಾರ್ಯಪದ್ಧತಿ ಹಾಗೂ ಸಮಾಜಮುಖಿ ರಾಜಕಾರಣದ ಅಗತ್ಯತೆ ಕುರಿತು ಕಾರ್ಯಕರ್ತರಿಗೆ ವಿಶದವಾದ ಮಾರ್ಗದರ್ಶನ ನೀಡಲಾಯಿತು. ಕಾರ್ಯಕರ್ತರು ಉತ್ಸಾಹಭರಿತವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.