Home ಜಿಲ್ಲೆ ನಿಸರ್ಗದ ಮಡಿಲಲ್ಲಿ ಚಿಕಿತ್ಸಾ ವಿಧಗಳಿವೆ : ನಿರ್ಮಳೆ

ನಿಸರ್ಗದ ಮಡಿಲಲ್ಲಿ ಚಿಕಿತ್ಸಾ ವಿಧಗಳಿವೆ : ನಿರ್ಮಳೆ

ಔರಾದ :ಮಾ.5: ನಿಸರ್ಗದ ಮಡಿಲಲ್ಲಿ ಬೆಳೆಯುವು ಅನೇಕ ಗಿಡ, ಮರ, ಬಳ್ಳಿಗಳು, ಹೂವು, ಕಾಯಿ, ಎಲೆ, ತೋಗಟೆ, ಬೇರು, ಮಣ್ಣಿನಲ್ಲಿ ಅನೇಕ ವಿಧದ ಔಷಧೀಯ ಗುಣವಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಅವರು ಹೇಳಿದರು.

ಅವರು ವಚನ ಚಾರಿಟೇಬಲ್ ಸೊಸೈಟಿ ಮತ್ತು ಬಸವ ಬಾಂಧವ್ಯ ಬಳಗದ ವತಿಯಿಂದ ಹೋಳಿ ಹಬ್ಬ ಹಾಗೂ ಶರಣ ನಗೆಮಾರಿ ತಂದೆ ಅವರ ಸ್ಮರಣಾರ್ಥವಾಗಿ ಯನಗುಂದಾ ಗ್ರಾಮದ ನಾಟಿ ವೈದ್ಯ ಬಸವರಾಜ ಘೂಳೆ ಅವರ ಹೊಲದಲ್ಲಿ ಹಮ್ಮಿಕೊಂಡ ಮಡ್ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು 13ನೇ ಶತಮಾನದ ಬಸವಾದಿ ಶರಣರಲ್ಲಿ ನಗೆಮಾರಿ ತಂದೆ ನಗಿಸುವುದು ಮತ್ತು ನಗಿಸುತ್ತಾ ಜ್ಞಾನಪ್ರಸಾರ ಮಾಡುತ್ತಿದ್ದರು, ತಮ್ಮ ತಿಳಿನಗೆಯ ಮೂಲಕವೇ ಸಮಾಜದ ಅಂಕುಡೊಂಕು ತಿದ್ದುತಿದ್ದರು, ಆತುರವೈರಿ ಮಾರೇಶ್ವರ ಅವರ ಅಂಕಿತನಾಮದ, ಹಾಸ್ಯವೇ ಅವರ ಪ್ರವೃತ್ತಿ ಆಗಿತ್ತು ಎಂದು ತಿಳಿಸಿದರು. ಶರಣರ ಆಶಯದಂತೆ ನಾವೇಲ್ಲರೂ ನಮ್ಮ ಅವಗುಣಗಳು ಅಳಿದು, ಸದ್ಗುಣಗಳು ಬೆಳೆಸಿಕೊಳ್ಳಬೇಕಾದರೆ, ಸಜ್ಜನರ ಸಹವಾಸ ಅಗತ್ಯವಾಗಿರುತ್ತದೆಂದು ತಿಳಿಸಿದರು.

ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷರಾದ ಡಾ. ಮನ್ಮಥ ಡೊಳೆ ಅವರು ಮಾತನಾಡಿ ಪ್ರಕೃತಿದತ್ತವಾಗಿ ದೊರೆಯುವ ಅನೇಕ ವಸ್ತುಗಳು ಔಷಧಿ ಗುಣಗಳಿಂದ ಕೂಡಿವೆ. ಮಡ್ಬಾತ್ ನೈಸರ್ಗಿಕ ಚಿಕಿತ್ಸಾ ವಿಧಾನವಾಗಿದ್ದು, ಚರ್ಮದ ಆರೋಗ್ಯ ಕಾಪಾಡಿ ಚರ್ಮಕ್ಕೆ ಕಾಂತಿ ಬರುವಂತೆ ಮಾಡುತ್ತದೆ. ಚರ್ಮ ರೋಗ ತಡೆಯಲು ಪೂರಕವಾಗಿದೆ. ದೇಹದಲ್ಲಿ ವಿಷಕಾರಿ ವಸ್ತು ಹೊರಹಾಕಲು, ನೋವು ನಿವಾರಕವಾಗಿಯು ಮಡ್ಬಾತ್ ಕಾರ್ಯ ಮಾಡುತ್ತದೆಂದು ನುಡಿದರು.

ನಾಟಿವೈದ್ಯ ಬಸವರಾಜ ಘೂಳೆ ಮಾತನಾಡಿ ನಮ್ಮ ಪೂರ್ವಜರು ಹೂವುಗಳಿಂದಲೇ ಬಣ್ಣ ತಯಾರಿಸಿ, ಹೋಳಿ ಬಣ್ಣ ಆಡುತ್ತಿದ್ದರು, ಆದರೆ ಇಂದು ಮಾರುಕಟ್ಟೆಯಲ್ಲಿ ರಸಾಯನಿಕಯುಕ್ತವಾದ ಬಣ್ಣ ಬಳಿಯುವುದು ಅನೇಕ ಸಮಸ್ಯೆವುಂಟು ಮಾಡುತ್ತಿದೆ. ಸಾಧ್ಯವಾದಷ್ಟು ನಾವು ರಸಾಯನಿಕ ವಸ್ತುಗಳಿಂದ ಸಿದ್ದವಾಗುವ ಬಣ್ಣದಾಟ್ಟ ಬಿಟ್ಟು ಬದುಕಬೇಕೆಂದು ತಿಳಿಸಿದರು.

ವಚನ ಚಾರಿಟೇಬಲ್ ಸೊಸೈಟಿ ತಾಲೂಕ ಸಂಚಾಲಕ ಡಿ.ಡಿ ಬೊಳಿಗಾವೆ ಅವರು ಮಾತನಾಡಿ ಮಡ್ಬಾತ್ ಎಂದರೆ ಮಣ್ಣಿನ ಸ್ನಾನವೆಂದು ಪ್ರಖ್ಯಾತಿ ಪಡೆದಿದೆ. ಕೆಲಸದ ಒತ್ತಡದಲ್ಲಿರುವವರು ತಮ್ಮ ಬಿಡುವಿನ ಸಮಯದಲ್ಲಿ ಮಣ್ಣಿನ ಸ್ನಾನ ಮಾಡುವ ಉದ್ದೇಶದಿಂದಲೇ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಶುಲ್ಕವು ಇರುತ್ತದೆ. ಆದರೆ ಯನಗುಂದಾದಲ್ಲಿ ಪ್ರತಿವರ್ಷ ಸಾರ್ವಜನಿಕವಾಗಿ ಮಡ್ಬಾತ್ ವ್ಯವಸ್ಥೆ ಮಾಡುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭೀಮಾಶಂಕರ ಜೀರ್ಗೆ, ವೀರೇಶ ಅಲ್ಮಾಜೆ, ಧನರಾಜ ಪೀಟ್ರೆ, ಗುರುರಾಜ ಯಾದವ, ರಾಜಕುಮಾರ ಬಿರಾದಾರ, ಶರಣಪ್ಪಾ ಚಿಟ್ಮೆ, ಶಿವಕುಮಾರ ಮಜಗೆ, ಗುರುಪಾದಪ್ಪಾ ಕೋರೆ, ಸಂಜುಕುಮಾರ ವಳಂಡೆ ಅಂಬಾದಾಸ ನೆಳಗೆ, ಮಲ್ಲಿಕಾರ್ಜುನ, ಟೆಕರಾಜ್ ಆನಂದ ದ್ಯಾಡೆ, ಅಮರಸ್ವಾಮಿ ಸ್ಥಾವರಮಠ, ಕೃಷ್ಣ ಪಾಟೀಲ್ ಪ್ರಶಾಂತ ಮಜಗೆ, ಪ್ರಶಾಂತ ಮುಳ್ಳೆ, ರಮೇಶ ಪಾಂಚಾಳ, ಮಹಾದೇವ ಸಿಂಧೆ, ವಿಜಯಕುಮಾರ ಹೀಗೆ ಇನ್ನೂ ಅನೇಕರು ಭಾಗವಹಿಸಿದರು

ಮಲ್ಲಿಕಾರ್ಜುನ ಟಂಕಸಾಲೆ ಸಾಮೂಹಿಕ ಪ್ರಾರ್ಥನೆ ನಡೆಸಿದರೆ, ಗಜಾನನ್ ಮಳ್ಳಾ ಸ್ವಾಗತಿಸಿದರು, ಜಗನ್ನಾಥ ದೇಶಮುಖ ನಿರೂಪಿಸಿದರು. ಅಂಬಾದಾಸ ನೆಳಗೆ ವಂದಿಸಿದರು.


ಯುವ ಸಮೂಹ ನಿಸರ್ಗ ಪ್ರೇಮ ಮೆರೆಯಲಿ : ದ್ಯಾಡೆ

ಪ್ರಕೃತಿ ನಮಗೆ ಅಪಾರ ಆಯುರ್ವೇದ ಸಂಪತ್ತು ನೀಡಿದೆ ಆಧುನಿಕ ಯುಗದಲ್ಲಿ ಬದುಕುತ್ತಿರುವ ನಾವು ನೈಸರ್ಗಿಕವಾಗಿ ಲಭ್ಯವಿರುವ ಆಯುರ್ವೇದ ಪದ್ಧತಿ ಅಳವಡಿಸಿಕೊಳ್ಳಬೇಕು ಆ ನಿಟ್ಟಿನಲ್ಲಿ ಇಂದು ಎಲ್ಲ ಸಮೂಹ ನಿಸರ್ಗದ ಮಡಿಲಿನಲ್ಲಿ ಮಿಂದೆದ್ದು ಸಮಾಜಕ್ಕೆ ನಿಸರ್ಗ ಪ್ರೇಮ ಮೆರೆದದ್ದು ಸಂತಸ ನೀಡಿದೆ.

ಆನಂದ ಪಿ.ದ್ಯಾಡೆ
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷರು ಔರಾದ (ಬಾ)