
ಗುರುಮಠಕಲ್: ಏ.೩೦:ತಾಲ್ಲೂಕಿನ ಬುದುರ ಗ್ರಾಮದಲ್ಲಿ ಸಂಭವಿಸಿದ ಸಿಡಿಲಿನ ದುರ್ಘಟನೆಯಲ್ಲಿ ೬೬ ಕುರಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಾಸಕ ಶರಣಗೌಡ ಕಂದಕೂರು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತೀಚೆಗೆ ಸೋಮವಾರ ಸಂಜೆ ಸಂಭವಿಸಿದ ಈ ದುರಂತದಲ್ಲಿ ಕುರಿಗಳ ದಂಡು ಒಂದೇ ಹೊತ್ತಿನಲ್ಲಿ ಸಿಡಿಲಿಗೆ ಬಲಿಯಾಗಿದ್ದು, ಕುರಿಗಾಹಿಗಳಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಘಟನೆ ತಿಳಿದು ತಕ್ಷಣ ಸ್ಪಂದಿಸಿದ ಶಾಸಕ ಕಂದಕೂರು ಅವರು ಬುಧವಾರ ಗ್ರಾಮಕ್ಕೆ ತೆರಳಿ, ಹಾನಿಗೊಳಗಾದ ಕುರಿಗಳ ಮಾಲೀಕರನ್ನು ಭೇಟಿ ಮಾಡಿ ಅವರ ಸಂಕಷ್ಟವನ್ನು ಆಲಿಸಿದರು.
ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಸಾವಿಗೀಡಾದ ಕುರಿಗಳ ಸಂಖ್ಯೆ ಹಾಗೂ ನಷ್ಟದ ವಿವರಗಳನ್ನು ಪಡೆದುಕೊಂಡರು. ನಷ್ಟದ ಸರಿಯಾದ ಅಂದಾಜು ಮಾಡಿ, ಸರ್ಕಾರದ ನಿಯಮಾವಳಿಗಳ ಪ್ರಕಾರ ಶೀಘ್ರ ಪರಿಹಾರ ಒದಗಿಸುವಂತೆ ಕಂದಾಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಮಳೆಗಾಲದಲ್ಲಿ ಸಿಡಿಲು ಸೇರಿದಂತೆ ಪ್ರಕೃತಿ ವಿಕೋಪಗಳಿಂದಾಗುವ ಹಾನಿಯನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಅಗತ್ಯವಿದೆ ಎಂದು ತಿಳಿಸಿದರು. ಸರ್ಕಾರದಿಂದ ಪರಿಹಾರ ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಚೆನ್ನಮಲ್ಲಪ್ಪ ಘಂಟಿ, ಗ್ರೇಡ್-೨ ತಹಸೀಲ್ದಾರ್ ನರಸಿಂಹ ಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್ಚಂದ್ರ ಕಟಕಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





















