
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಅ.29:- 12ನೇ ಶತಮಾನದಲ್ಲಿಯೇ ಬಸವಣ್ಣನವರು ಸಮ ಸಮಾಜ ನಿರ್ಮಾಣದ ಕನಸು ಕಂಡವರು ಅದು 900 ವರ್ಷಗಳು ಕಳೆದರು ಇನ್ನು ಹೀಡೇರದಿರುವುದಕ್ಕೆ ಸಮಾಜ ಸಮಾಜಗಳ ನಡುವೆ, ಧರ್ಮ ಧರ್ಮಗಳ ನಡುವೆ, ಜಾತಿ ಜಾತೀಗಳ ನಡುವೆ ದ್ವೇಷ, ಜಾತಿ ತಾರತಮ್ಯ ಹುಟ್ಟು ಹಾಕುವ ಪಟ್ಟಭದ್ರ ಹಿತಾಶಕ್ತಿಗಳೇ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.
ಪಟ್ಟಣದ ಡಾ.ರಾಜಕುಮಾರ್ ಬಾನಾಂಗಳದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವರ್ಗ ರಹಿತ, ಜಾತಿ ರಹಿತ,ಮಾನವೀಯತೆಯಿಂದ ಕೂಡಿದ ಸಮಾಜ ನಿರ್ಮಾಣ ಬಸವಣ್ಣನವರದಾಗಿತ್ತು ಎಂದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳು ಕಳೆದಿವೆ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನವನ್ನ ರಚನೆ ಮಾಡಿ ಅದು ಜಾರಿಗೆ ತಂದು 78 ವರ್ಷಗಳಾಗಿವೆ. ಬಸವಣ್ಣನವರ ವಿಚಾರದಾರೆಗಳು ಸಂವಿಧಾನದಲ್ಲಿವೆ. ಪ್ರತಿಯೊಬ್ಬರು ಸಂವಿಧಾನವನ್ನು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ನಾನು ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ ಮಾಡಿದೆ ಎಂದು ತಿಳಿಸಿದರು.
ಬುದ್ದ 2500 ವರ್ಷಗಳ ಹಿಂದೆ ಸಮ ಸಮಾಜದ ಸಿದ್ದಾಂತ ಹೇಳಿದರು.900 ವರ್ಷಗಳ ಹಿಂದೆ ಬಸವಣ್ಣನವರು ಹೇಳಿದರು. ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿದರು ಆದರೂ ಕೂಡ ಅವರು ಕಂಡಿದಂತ ಕನಸಿನ ಭಾರತ ಇನ್ನು ನಿರ್ಮಾಣವಾಗದಿರುವುದು ವ್ಯತೆಯ ಸಂಗತಿ. ಕಾರಣ ಜಾತಿ ವ್ಯವಸ್ಥೆಗೆ ಚಲನೆ ಇಲ್ಲಾ. ಯಾವ ವ್ಯವಸ್ಥೆಗೆ ಚಲನೆ ಇಲ್ಲವೋ ಅಲ್ಲಿ ಜಡತ್ವ ಇರುತ್ತದೆ. ಜಡತ್ವವನ್ನು ಹೋಗಲಾಡಿಸಿ ಚಲನೆ ಕೊಡಬೇಕಾಗಿರುವುದು ನಮ್ಮೆಲ್ಲರ ಜವಬ್ಧಾರಿ ಎಂದರು.
ಸಮಾಜದಲ್ಲಿ ಅಸಮಾನತೆ ಹೋಗುವವರೆಗೆ ಸಮ ಸಮಾಜ ನಿರ್ಮಾಣವಾಗಲ್ಲ. ಅದಕ್ಕಾಗಿ ಪ್ರತಿಯೊಬ್ಬ ಬಡವರಿಗೆ, ಸಮಾಜದಲ್ಲಿ ವಂಚಿತರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ತುಂಬಬೇಕು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದು ಅದು ಯಶಸ್ವಿಯಾಗ ಬೇಕಾದರೇ ಸಂವಿಧಾನದ ಆಶಯಗಳು, ಬಸವಾದಿ ಶರಣರ ವಿಚಾರಧಾರೆಗಳು, ಚಿಂತನೆಗಳಿಂದ ಮಾತ್ರ ಸಾಧ್ಯ, ಅದಕ್ಕಾಗಿ ನಾನು ಮುಖ್ಯಮಂತ್ರಿಯಾಗಿದ್ದಾಗ ಅನುಭವ ಮಂಟಪದ ಅಭಿವೃದ್ಧಿಗೆ ಸಮಿತಿ ಮಾಡಿ ವರದಿ ಪಡೆದೆ. ನಂತರ ಬಂದ ಸರ್ಕಾರ ಅದನ್ನು ಜಾರಿ ಮಾಡಿತು ಮತ್ತೆ ನಾನು ಅಧಿಕಾರಕ್ಕೆ ಬಂದ ನಂತರ 280 ಕೋಟಿ ರೂಪಾಯಿಗಳನ್ನು ನೀಡಿದ್ದೇನೆ ಎಂದು ತಿಳಿಸಿದರು.
ನಾವು ಬಸವಣ್ಣನವರ ಜಯಂತಿ ಮಾಡಿದ ಕೂಡಲೆ ತೃಪ್ತಿಯಾಗುವುದಿಲ್ಲ. ಅವರ ವಿಚಾರಧಾರೆಯಲ್ಲಿ ನಾವು ನಡೆಯಬೇಕು. ಆಗ ನಾವು ಅವರಿಗೆ ಸಲ್ಲಿಸುವ ಗೌರವ. ಆಚರವೇ ಸ್ವರ್ಗ ಅನಾಚಾರವೇ ನರಕ ಎಂಬಂತೆ ನಾವು ಮಾಡಬಾರದ ಕೆಲಸ ಮಾಡಿ ದೇವರನ್ನು ಪೂಜಿಸಿದರೇ ಅದು ಪ್ರಯೋಜನ ಆಗುವುದೇ. ಒಳ್ಳೆಯ ಕೆಲಸ ಮಾಡಿದಾಗ ಮಾತ್ರ ಪ್ರತಿಫಲ ದೊರಕಲಿದೆ.
ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆ ತರುವ ಉದ್ದೇಶದಿಂದ ಎಲ್ಲಾ ಬಡವರಿಗು ಅನ್ನಭಾಗ್ಯದಂತ ಕಾರ್ಯಕ್ರಮ, ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆ. ಈ ತಾಲೂಕಿನಲ್ಲಿ ನಿರ್ಮಾಣ ಅಂತದಲ್ಲಿರುವ ಬಸವ ಭವನ ನಿರ್ಮಾಣಕ್ಕೆ ನಾನು ಸಹಕರಿಸಿದ್ದೇ ಈಗಲು ಕೂಡ ಶಾಸಕಡಿ.ರವಿಶಂಕರೊಂದಿಗೆ ಕೈ ಜೋಡಿಸುತ್ತೇನೆ. ಕಳೆದ ಭಾರಿಯಂತೆ ಮುಂದಿನ 2028 ಕ್ಕೂ ನೀವು ರವಿಶಂಕರ್ಗೆ ಮತ್ತು ನಮ್ಮ ಪಕ್ಷಕ್ಕೆ ಆರ್ಶೀವಾದ ಮಾಡಿ ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಮಾನವ ಧರ್ಮಕ್ಕೆ ಶ್ರೇಷ್ಠ ಸಂದೇಶ ನೀಡಿದ್ದು ಬಸವಣ್ಣನವರು, ದೇಶದಲ್ಲಿಯೇ ನಮ್ಮ ಕರ್ನಾಟಕ ರಾಜ್ಯಕ್ಕೆ ವಿಶಿಷ್ಟ ಸ್ಥಾನಮಾನ ಇದೆ. ನಮ್ಮ ವೀರಶೈವ ಲಿಂಗಾಯಿತ ಮಠಗಳು ರಾಜ್ಯಕ್ಕೆ ಅಪಾರ ಕೊಡುಗೆ ನೀಡಿವೆ. ಅನ್ನ, ಅಕ್ಷರ, ದಾಸೋಹಗಳ ಮೂಲಕ ಸರ್ವ ಸಮಾಜಗಳಿಗೆ ನೆರಳಾಗಿದೆ. ರಾಜ್ಯದ ಒಳತಿಗಾಗಿ ನಮ್ಮ ಸಮಾಜ ಒಗ್ಗಟ್ಟಿನಲ್ಲಿ ಸಾಗಬೇಕಿದೆ ಎಂದರು.
ರಾಜಕಾರಣದಲ್ಲಿ ಕೆಲವರು ಮೆಟ್ಟಿಲುಗಳನ್ನು ಹತ್ತುವವರೆಗೆ ನೆನಪು ಆ ನಂತರ ಮರೆಯುತ್ತಾರೆ. ರೈತರ ಹೆಸರಿನಲ್ಲಿ ಬಜೆಟ್ ಮಾಡಿ ರೈತರು, ಬಡವರ ಪರ, ಸರ್ವ ಸಮಾಜಗಳಿಗೆ ಭಾಗ್ಯಲಕ್ಷ್ಮೀ, ಬೈಸಿಕಲ್ ಯೋಜನೆಗಳನ್ನು ನೀಡಿದ ನಮ್ಮ ಬಿ.ಎಸ್.ಯಡಿಯೂರಪ್ಪರವರನ್ನು ರಾಜ್ಯದ ಜನ ಇಂದಿಗು ನೆನಪು ಮಾಡಿಕೊಳ್ಳುತ್ತಾರೆ.
ಮಠಗಳು ನಮ್ಮ ಸಮಾಜವನ್ನು ಒಗ್ಗೂಡಿಸಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವುದನ್ನು ತಡೆದು ಬಸವಣ್ಣನವರ ಸಮ ಸಮಾಜದ ನಿರ್ಮಾಣ ಮಾಡಬೇಕು. ಎಂದು ಹೇಳಿದರು.
ಕೆಲವರು ರಾಜಕಾರಣದಲ್ಲಿ ಚಿತ್ರನಟರು, ಕಲಾವಿದರನ್ನು ಮೀರಿಸುವಂತೆ ನಟನೆ ಮಾಡುತ್ತಾರೆ. ಆದರೆ ಬಸವಣ್ಣನವರಂತೆ ಮಹಿಳೆಯರಿಗೆ ಸಮಾನತೆ ನೀಡಲು ನಮ್ಮ ಪ್ರಧಾನ ಮಂತ್ರಿಗಳು ಶೇ 33 ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರಲಿದ್ದಾರೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಮಾತನಾಡಿ ಲೋಕ ಕಲ್ಯಾಣಕ್ಕಾಗಿ, ಸಮ ಸಮಾಜಕ್ಕಾಗಿ, ಸಾಮಾಜಿಕ ನ್ಯಾಯಕ್ಕಾಗಿ ಜಗತ್ತಿನಲ್ಲಿ ಯಾವುದಾದರೂ ಕ್ರಾಂತಿ ನಡೆದಿದ್ದರೆ ಅದು ಕಲ್ಯಾಣದ ಕ್ರಾಂತಿ ಮಾತ್ರ. ವಿಶ್ವಗುರು ಬಸವಣ್ಣನವರು ಈ ಜಗತ್ತಿನ ಬೆಳಕು. ಅಕ್ಕ ಮಹಾದೇವಿ ಸೇರಿದಂತೆ 33 ಶರಣೆಯರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅನುಭವ ಮಂಪಟದಲ್ಲಿ ಅವಕಾಶ ನೀಡಲಾಗಿತ್ತು. ಬಸವಾದಿ ಪ್ರಮಥರು 12ನೇ ಶತಮಾನದಲ್ಲೇ ಮಹಿಳಾ ಸ್ವಾತಂತ್ರ?ಯಕ್ಕೆ ನಾಂದಿ ಹಾಡಿದ್ದರು ಎಂದು ತಿಳಿಸಿದರು.
ಬಸವಣ್ಣನವರನ್ನು ನಮ್ಮ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ತಾವೂ ಸೇರಿದಂತೆ ಸಮಾಜದ ಜನಪ್ರತಿನಿಧಿಗಳು, ಮಠಾಧಿಪತಿಗಳು, ಹರಚರಗುರು ಮೂರ್ತಿಗಳು ಅಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರಿಗೆ ಮನವಿ ಮಾಡಿದಾಗ, ತಡ ಮಾಡದೆ ಬಸವಣ್ಣನವರನ್ನು ಈ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರು ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಬೇಕು ಎಂದರು.
ಯಲಹಂಕ ಬಳಿಯ ಮಾದಪ್ಪನ ಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ನಿರ್ಮಾಣ ಮಾಡುವ ಸಂಕಲ್ಪ ಮಾಡಿ ಮಾನ್ಯಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದಾಗ ಅವರು ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದಷ್ಟೇ ಅಲ್ಲ. ಇದಕ್ಕೆ ಸಚಿವ ಸಂಪುಟದ ಅನುಮೋದನೆಯನ್ನೂ ನೀಡಿ 20 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದರು ಎಂದು ತಿಳಿಸಿದರು.
ಇಂದು ಸಮಾಜದಲ್ಲಿ ದ್ವೇಷ, ಅಸೂಯೆ, ಅಶಾಂತಿ ಇದೆ. ಧರ್ಮದ ಹೆಸರಲ್ಲಿ ಕೆಲವರು ವಿಷಬೀಜ ಬಿತ್ತುತ್ತಾ ಸಮಾಜದ ಶಾಂತಿಯನ್ನೇ ಕದಡುತ್ತಿದ್ದಾರೆ. ಆದರೆ ಬಸವಣ್ಣನವರು 12ನೇ ಶತಮಾನದಲ್ಲಿ ಧರ್ಮ ಎಂದರೇನು ಎಂಬುದನ್ನು ಒಂದು ಸರಳ ವಾಕ್ಯದಲ್ಲಿ ತಿಳಿಸಿದ್ದರು. ದಯೆ ಇಲ್ಲದ ಧರ್ಮ ಯಾವುದಯ್ಯ, ದಯವೇ ಧರ್ಮದ ಮೂಲ ಎಂಬ ಸಂದೇಶ ಸಾರಿದರು ಎಂದರು.
ಇಂದಿನ ಯುವಜನರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅವರಿಗೆ ವಚನಗಳನ್ನು ಕಲಿಸಿದರೆ, ಅದರ ಅರ್ಥ ತಿಳಿಸಿದರೆ ಆವರು ಸಂಸ್ಕಾರವಂತರಾಗುತ್ತಾರೆ. ಚಾರಿತ್ರಯ ಉಳಿಸಿಕೊಳ್ಳುತ್ತಾರೆ.
ಸಮಾಜದ ಗಣ್ಯ ವ್ಯಕ್ತಿಗಳಾಗುತ್ತಾರೆ. ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಯುವ ಉತ್ಸಾಹಿ ಮತ್ತು ದಕ್ಷ ಶಾಸಕರಾಗಿದ್ದು, ಸಮಾಜದ ಜನರೊಂದಿಗೆ ನಿಂತಿದ್ದಾರೆ. ಮುಂದಿನ ದಿನಗಳಲ್ಲೂ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ತುಮಕೂರು ಶ್ರೀಕ್ಷೇತ್ರ ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು. ಶಾಸಕರುಗಳಾದ ಡಿ.ರವಿಶಂಕರ್, ಗಣೇಶ್ ಪ್ರಸಾದ್, ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಸ್.ತೋಂಟದಾರ್ಯ, ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ವೀಣಾ ಕಾಶಪ್ಪನವರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಪಿ.ರಮೇಶ್, ವೀರಶೈವ ಲಿಂಗಾಯಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಲಾಲನಹಳ್ಳಿ ಮಹೇಶ್ ಇನ್ನಿತರರು ಮಾತನಾಡಿದರು.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ಮೈಲಾಕ್ ನಿಗಮ ಮಂಡಳಿ ಅಧ್ಯಕ್ಷ ಹೆಚ್.ಡಿ.ಗಣೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಾಲಿಗ್ರಾಮ ತಾಲೂಕು ಅಧ್ಯಕ್ಷ ಕೆ.ಬಿ.ನಟರಾಜ್, ವಿವಿಧ ಮಠಗಳ ಮಠಾದೀಶರು, ವೀರಶೈವ ಲಿಂಗಾಯಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.
























