Home ಜಿಲ್ಲೆ ಸಿಐಟಿಯು ನಿಂದ ವಿಶ್ವ ಕಾರ್ಮಿಕ ದಿನಾಚರಣೆ

ಸಿಐಟಿಯು ನಿಂದ ವಿಶ್ವ ಕಾರ್ಮಿಕ ದಿನಾಚರಣೆ

ಹೊಸಪೇಟೆ.ಮೇ,2-  ನಗರದ ಶ್ರಮಿಕ ಭವನದ ಬಳಿ ಶುಕ್ರವಾರ ಸಿಐಟಿಯು ಜಿಲ್ಲಾ ಘಟಕದ ವತಿಯಿಂದ 141ನೇ ವಿಶ್ವ ಕಾರ್ಮಿಕ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಐಟಿಯು ಜಿಲ್ಲಾ ಮುಖಂಡ ಆರ್.ಭಾಸ್ಕರ್ ರೆಡ್ಡಿ, 1886 ರಲ್ಲಿ ಚಿಕಾಗೋ ನಗರದಲ್ಲಿ ಕಾರ್ಮಿಕ ವರ್ಗ ಸಿಡಿದೇಳಲು ಕಾರಣವಾದ ಸ್ಥಿತಿ ಇಂದು ಜಗತ್ತಿನಾದ್ಯಂತ ಮತ್ತೆ ಮರುಕಳಿಸಿದೆ. ಭಾರತವು ಇದರಿಂದ ಹೊರತಾಗಿಲ್ಲ. ಕನಿಷ್ಟ ಕೂಲಿ ಹೆಚ್ಚಳ, ಗೌರವಯುತವಾದ ಬದುಕಿಗಾಗಿ ನೋಯ್ಡಾ ಕೈಗಾರಿಕಾ ಬೇಸ್ ನಲ್ಲಿ ಇತ್ತೀಚೆಗೆ ಗುತ್ತಿಗೆ ಕಾರ್ಮಿಕರು ದಿಢೀರ್ ನಡೆಸಿದ ಮುಷ್ಕರ, ಸಂಘರ್ಷ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ.

ಭಾರತ ಸರಕಾರ ಕಾರ್ಮಿಕ ಕಾಯ್ದೆಗಳನ್ನು ಸಂಹಿತೆ ಹೆಸರಿನಲ್ಲಿ ಕಿತ್ತು ಹಾಕಿದೆ. ಎಂಟು ಗಂಟೆ ದುಡಿಮೆಯ ಕಾನೂನು ಬದಲಾಗಿದೆ. ಸಂಘ ಕಟ್ಟುವ, ಪ್ರಶ್ನಿಸುವ ಅವಕಾಶ ಕಿತ್ತುಕೊಳ್ಳಲಾಗಿದೆ. ಶಿಕ್ಷಣ, ಆರೋಗ್ಯ ವ್ಯಾಪಾರೀಕರಣಗೊಂಡು ದುಬಾರಿ ಆಗಿವೆ. ತುಂಡು ಭೂಮಿ, ವಸತಿಗಾಗಿ ಪರಿತಪಿಸಬೇಕಿದೆ. ಇಂತಹ ಸ್ಥಿತಿಯ ಎದುರಾಗಿರುವ ಈ ಸಂದರ್ಭದಲ್ಲಿ ಕಾರ್ಮಿಕ ವರ್ಗ ಸಂಘಟಿತರಾಗಿ ಸಿಡಿದೇಳದೆ ಹೋದರೆ ಅವರಿಗೆ ಉಳಿಗಾಲವಿಲ್ಲ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ ಎಂದರು.

ಸಿಐಟಿಯು ಸಂಚಾಲಕಿ ಸ್ವಪ್ನ ಕೆ.ಎಂ. ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ  ಸಿಐಟಿಯು ಜಿಲ್ಲಾ ಮುಖಂಡರಾದ ಎನ್.ಯಲ್ಲಾಲಿಂಗ, ಗೋಪಾಲ್, ಸಂತೋಷ, ಮರಡಿ ಜಂಬಯ್ಯ ನಾಯಕ, ಸ್ವಾಮಿ ಕಾರ್ಮಿಕರು ಭಾಗವಹಿಸಿದ್ದರು.