
ಸಂಜೆವಾಣಿ ವಾರ್ತೆ
ಹೊಸಪೇಟೆ.ಸೆ.15 ವಿಜಯನಗರ ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಶಾಂತಿ-ಸೌಹಾರ್ಧತೆಯಿಂದ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ಜರುಗಿದ ಪತ್ರಿಕಾ ಗೋಷ್ಠೀಯಲ್ಲಿ ಎಸ್ಪಿ ಎಸ್.ಜಾಹ್ನವಿ ಅವರು ಈ ವಿಷಯ ತಿಳಿಸಿದರು.
ಜಿಲ್ಲೆಯಾದ್ಯಂತ 2026ರ ಗೌರಿ-ಗಣೇಶ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಆಚರಿಸಲು ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದು, ಸಾರ್ವಜನಿಕ ಭದ್ರತೆಯ ಹಿತದೃಷ್ಟಿಯಿಂದ ಜಿಲ್ಲಾದ್ಯಂತ ಡಿ.ಜೆ ಸೌಂಡ್ ಸಿಸ್ಟಮ್ ಹಾಗೂ ಹೆಚ್ಚಿನ ಡೆಸಿಬಲ್ ಶಬ್ದವೃದ್ದಿ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
2230 ಮೂರ್ತಿಗಳ ಪ್ರತಿಷ್ಠಾಪನೆ:
ವಿಜಯನಗರ ಜಿಲ್ಲಾದ್ಯಂತ ಒಟ್ಟು 2230 ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಹೊಸಪೇಟೆ ಉಪವಿಭಾಗದಲ್ಲಿ 440, ಕೂಡ್ಲಿಗಿ ಉಪವಿಭಾಗದಲ್ಲಿ 807 ಹಾಗೂ ಹರಪನಹಳ್ಳಿ ಉಪವಿಭಾಗದ ವ್ಯಾಪ್ತಿಯಲ್ಲಿ 983 ಗಣೇಶ ಮೂರ್ತಿಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು ಸುಮಾರು 2,230 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.
ವಿಸರ್ಜನೆ:
ಜಿಲ್ಲೆಯಲ್ಲಿ ಪ್ರತಿಷ್ಠಾಪನೆಗೊಂಡ 2230 ಸಾರ್ವಜನಿಕ ಗಣೇಶ ಮೂರ್ತಿಗಳ ಪೈಕಿ ಮೊದಲ ದಿನ 64, 3ನೇ ದಿನ 1432, 5ನೇ ದಿನ 674, 7ನೇ ದಿನ 22, 9ನೇ ದಿನ 29, 11ನೇ ದಿನ 04, 13ನೇ ದಿನ 05 ಹಾಗೂ 15ನೇ ದಿನ 01 ಸಾರ್ವಜನಿಕ ಗಣಪತಿಗಳು ವಿಸರ್ಜನೆಗೊಳ್ಳುತ್ತಿವೆ ಎಂದು ಎಸ್ಪಿ ಎಸ್.ಜಾಹ್ನವಿ ಮಾಹಿತಿ ನೀಡಿದರು.
ಭಾರಿ ಪೊಲೀಸ್ ಭದ್ರತೆ:
ಗೌರಿ-ಗಣೇಶ ಹಬ್ಬವು ಶಾಂತಿ ಸೌಹಾರ್ಧತೆಯಿಂದ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ 3 ಡಿವೈಎಸ್ಪಿ, 14 ಇನ್ಸ್ಪೆಕ್ಟರ್, 27 ಪಿಎಸೈ, 76 ಎಎಸೈ, 550 ಹೆಚ್.ಸಿ/ಪಿ.ಸಿ, 450 ಗೃಹ ರಕ್ಷಕ ಸಿಬ್ಬಂದಿಗಳು, 3 ಕೆ.ಎಸ್.ಆರ್.ಪಿ ತುಕಡಿ ಹಾಗೂ 8 ಡಿ.ಎ.ಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರ ಜೊತೆಗೆ ಸ್ವಯಂ ಸೇವಕರು ಹಾಗೂ ನಿವೃತ್ತ ಅಧಿಕಾರಿಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ.
ಸುರಕ್ಷತಾ ಕ್ರಮಗಳು:
ಸಾರ್ವಜನಿಕ ಗಣೇಶ ಮೂರ್ತಿಗಳು ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ, ಆಂಬ್ಯುಲೆನ್ಸ್ ಹಾಗೂ ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ಸ್ಥಳೀಯ ನಗರಸಭೆ ವತಿಯಿಂದ ಸೂಕ್ತ ಬ್ಯಾರಿಕೇಡ್ ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸಾಮಾಜಿಕ ಜಾಲವಾಣದ ಮೇಲೆ ನಿಗಾ:
ಅದೇ ರೀತಿ ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ ವಹಿಸಿರುವ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲೆಯಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ತರುವಂತಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವವರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಹಲವಾರು ಶಾಂತಿ ಸಭೆಗಳನ್ನು ನಡೆಸಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಉತ್ಸವ ಸಮಿತಿಗಳಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಅಲ್ಲದೆ ಈಗಾಗಲೇ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ 4200 ಸಿಸಿ ಕ್ಯಾಮೆರಾಗಳಿದ್ದು. ಗಣೇಶ ಉತ್ಸವ ಹಿನ್ನಲೆಯಲ್ಲಿ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಹೆಚ್ಚುವರಿಯಾಗಿ 502 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಸೂಕ್ತ ನಿಗಾವಣೆ ವಹಿಸಲಾಗಿದೆ. ಈ ಮೂಲಕ ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಘಟನೆಗಳು ಹಾಗೂ ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಿಲಿದ್ದಾರೆ ಎಂದು ತಿಳಿಸಿದರು.
ಡಿಜೆ ಬಳಕೆ ಸಂಪೂರ್ಣ ನಿಷೇಧ:
ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35, 36 ಮತ್ತು ಶಬ್ದ ಮಾಲಿನ್ಯ ಹಾಗೂ ಭಾರತೀಯ ನಾಗರೀಕ ಸುರಕ್ಷತಾ ಸಂಹಿತೆ 2023 ಕಾಯ್ದೆ ಕಲಂ 163 ರ ಅನ್ವಯ ಸಾರ್ವಜನಿಕ ಶಾಂತಿ, ಆರೋಗ್ಯ ಹಾಗೂ ಸಾರ್ವಜನಿಕರ ಪ್ರಾಣ ಹಾಗೂ ಜೀವ ಭದ್ರತೆಯ ಹಿತದೃಷ್ಟಿಯಿಂದ ದಿ. 14-09-2026 ರಿಂದ 28-09-2026 ರವರೆಗೆ ಜಿಲ್ಲಾದ್ಯಂತ ಡಿ.ಜೆ ವ್ಯವಸ್ಥೆ ಮತ್ತು ಹೆಚ್ಚಿನ ಡೆಸಿಬಲ್ ಶಬ್ದವೃದ್ದಿ ಸಾಧನಗಳ ಬಳಕೆಯನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯ ರಾತ್ರಿ 10 ಗಂಟೆಯೊಳಗೆ ಪೂರ್ಣಗೊಳ್ಳಬೇಕು. ಕಾನೂನು ವಿರೋಧಿ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಗಣೇಶ ಉತ್ಸವ ಶಾಂತಿ, ಸೌಹಾರ್ಧತೆಯಿಂದ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು,































