
ಸಂಜೆವಾಣಿ ವಾರ್ತೆ
ತಿ.ನರಸೀಪುರ ಅ.29- ಮಾನವೀಯತೆ, ಸಮಾನತೆ, ತ್ಯಾಗ, ಸಹೋದರತ್ವ ಹಾಗೂ ಧರ್ಮದ ಮಹತ್ವವನ್ನು ಸಾರುವ ರಾಮಾಯಣ ಮಹಾಕಾವ್ಯವು ಭಾರತೀಯ ಸಂಸ್ಕೃತಿಯ ಅಮೂಲ್ಯ ನಿಧಿಯಾಗಿದೆ. ತನ್ನ ಅದ್ವಿತೀಯ ಕಾವ್ಯಪ್ರತಿಭೆಯಿಂದ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರು ಸಾಹಿತ್ಯ ಲೋಕದಲ್ಲಿ ಆದಿಕವಿಯಾಗಿ ಇಂದಿಗೂ ಗೌರವಿಸಲ್ಪಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಹೇಳಿದರು.
ತಾಲೂಕಿನ ತಾಯೂರು ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಮೀಸಲಾತಿ ಹೆಚ್ಚಳವನ್ನು ಹೈಕೋರ್ಟ್ ರದ್ದುಪಡಿಸಿರುವುದನ್ನು ವಿರೋಧಿಸಿ, ಕಪ್ಪು ಟವೆಲ್ ಧರಿಸುವ ಮೂಲಕ ಮೌನವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ರಾಮಾಯಣವು ಕೇವಲ ಧಾರ್ಮಿಕ ಮಹಾಕಾವ್ಯವಲ್ಲ. ಅದು ಮನುಷ್ಯನ ಬದುಕಿಗೆ ಅಗತ್ಯವಾದ ನೈತಿಕ ಮೌಲ್ಯಗಳು, ಕರ್ತವ್ಯಪ್ರಜ್ಞೆ ಹಾಗೂ ಆದರ್ಶ ಜೀವನದ ಸಂದೇಶವನ್ನು ಸಾರುವ ಕೃತಿಯಾಗಿದೆ. ಇದರಲ್ಲಿನ ವಿವಿಧ ಪಾತ್ರಗಳ ಮೂಲಕ ಕರುಣೆ, ಮಮತೆ, ತ್ಯಾಗ, ಭ್ರಾತೃತ್ವ, ಧರ್ಮರಕ್ಷಣೆ ಮತ್ತು ಉತ್ತಮ ಆಡಳಿತದ ತತ್ವಗಳನ್ನು ವಾಲ್ಮೀಕಿ ಪ್ರತಿಪಾದಿಸಿದ್ದಾರೆ. ಇವು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಸುಮಾರು 24 ಸಾವಿರ ಶ್ಲೋಕಗಳನ್ನು ಒಳಗೊಂಡಿರುವ ರಾಮಾಯಣವು ಭಾರತದ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ, ಯಕ್ಷಗಾನ ಹಾಗೂ ಚಲನಚಿತ್ರ ಕ್ಷೇತ್ರಗಳ ಮೇಲೂ ಪ್ರಭಾವ ಬೀರಿದೆ. ಅನೇಕ ಭಾಷೆಗಳಿಗೆ ಅನುವಾದಗೊಂಡಿರುವ ಈ ಮಹಾಕಾವ್ಯವು ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿದೆ. ಕಾವ್ಯದ ಭಾಷಾ ಸೌಂದರ್ಯ, ಪ್ರಕೃತಿಯ ವರ್ಣನೆ ಮತ್ತು ಜೀವನದರ್ಶನವು ಅದರ ಸಾರ್ವಕಾಲಿಕ ಮಹತ್ವವನ್ನು ಸಾರುತ್ತವೆ ಎಂದರು.
ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಹಾಗೂ ರಾಮಾಯಣದ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಸಮಾನತೆ ಮತ್ತು ಮಾನವೀಯತೆ ಆಧಾರಿತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರಾದ ರೇವನಾಯಕ, ತಮ್ಮಯ್ಯನಾಯಕ, ರಾಜುನಾಯಕ, ಅಂಗಡಿ ಮಂಜು, ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ರಮೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
























