Home ಜಿಲ್ಲೆ ಬಿಸಿಲಿನ ತಾಪ ಹಿನ್ನಲೆ ಶೇ.30 ರಷ್ಟು ಕೆಲಸ ಕಡಿತಕ್ಕೆ ಕಾರ್ಮಿಕರ ಒತ್ತಾಯ

ಬಿಸಿಲಿನ ತಾಪ ಹಿನ್ನಲೆ ಶೇ.30 ರಷ್ಟು ಕೆಲಸ ಕಡಿತಕ್ಕೆ ಕಾರ್ಮಿಕರ ಒತ್ತಾಯ

ಹೊಸಪೇಟೆ.ಮೇ,2-  ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಶುಕ್ರವಾರ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಾಸನಕೆರೆ ಗ್ರಾಮದ ಕೂಲಿ ಕಾರ್ಮಿಕರು ಒತ್ತಾಯಿಸಿದ್ದಾರೆ.

ವಿಶ್ವ ಕಾರ್ಮಿಕ ದಿನಾಚರಣೆ ಹಿನ್ನಲೆಯಲ್ಲಿ ಶುಕ್ರವಾರ ತಾಲೂಕಿನ ವ್ಯಾಸನಕೆರೆ ಬಳಿ ಕೇಕ್ ಕತ್ತರಿಸುವ ಮೂಲಕ ಸ್ಥಳೀಯ ನರೇಗಾ ಕಾರ್ಮಿಕರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ವಿಶ್ವ  ಕಾರ್ಮಿಕ ದಿನವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯಕರ್ತೆ ಶೈನಾಜ್, ಜಿಲ್ಲೆಯಲ್ಲಿ ಅಧಿಕ ಬಿಸಿಲಿನ ತಾಪ ಇರುವುದರಿಂದ ಕೆಲಸದಲ್ಲಿ ಶೇ.30 ರಷ್ಟು ಕೆಲಸ ಕಡಿತ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಅಲ್ಲದೆ ಇದೆ ಸಂದರ್ಭದಲ್ಲಿ  ನರೇಗಾ ಕೂಲಿ ಕಾರ್ಮಿಕರು ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರತಿ ವರ್ಷ ಬಿಸಿಲಿನ ತಾಪ ಅಧಿಕ ಇರುವುದರಿಂದ ಕೆಲಸದಲ್ಲಿ ಶೇ.30 ರಷ್ಟು ಕಡಿತ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಕೆಲಸ ಕಡಿತ ಮಾಡಿದ ಆದೇಶ ಈವರೆಗೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಶೀಘ್ರವೇ ಆದೇಶ ಹೊರಡಿಸುವಂತೆ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಒತ್ತಾಯಿಸಿ, ಪತ್ರ ಚಳುವಳಿ ನಡೆಸಿದರು.

ಅಲ್ಲದೆ ಈ ವರ್ಷದ ಕ್ರಿಯಾ ಯೋಜನೆ ಈವರೆಗೆ ಅನುಮೋದನೆ ಆಗದ ಹಿನ್ನಲೆಯಲ್ಲಿ  ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ಕೂಡಲೇ ಕ್ರೀಯಾ ಯೋಜನೆಗೆ ಅನುಮೋದನೆ ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನರೇಗಾ ಕೂಲಿ ಕಾರ್ಮಿಕರಾದ ಕೆ.ಕುಶಣ್ಣ, ತಿಂದಪ್ಪ, ರಾಮಲಿ,  ಭೀಮಪ್ಪ, ರಮೇಶ್, ವೆಂಕಟೇಶ್, ಲಕ್ಷಿ್ಮ, ನಬೀಸಾಬ್, ಯಲ್ಲಮ್ಮ, ಗಂಗಮ್ಮ, ಸುವರ್ಣ, ದೇವಕ್ಕ, ಕಾಳಮ್ಮ ಸೇರಿದಂತೆ ಮತ್ತಿತರರು ಇದ್ದರು.