
ಸಂಜೆವಾಣಿ ವಾರ್ತೆ
ಹೊಸಪೇಟೆ.ಜು.7 ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಸ್ವಲ್ಪ ಪ್ರಮಾಣದ ಏರಿಕೆ ಕಂಡಿದ್ದು. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ತುಂಗಭದ್ರಾ ಜಲಾಶಯ ಭತ್ತಿ, ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಕಂಗೆಟ್ಟಿದ್ದ ರೈತರಿಗೆ, ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ನೆಮ್ಮದಿಯನ್ನು ನೀಡಿದೆ.
ಸೋಮವಾರ 1587.92 ಅಡಿ ಇದ್ದ ತುಂಗಭದ್ರಾ ಜಲಾಶಯದ ನೀರಿನ ಮಟ್ಟ, ಇಂದು 1588.37 ಅಡಿಗೆ ಏರಿಕೆ ಕಂಡಿದೆ. ಅದೇ ರೀತಿ ಸೋಮವಾರ 9.379 ಟಿಎಂಸಿ ಇದ್ದ ಜಲಾಶಯದ ನೀರಿನ ಸಂಗ್ರಹ ಇಂದು 9.725. ಟಿಎಂಸಿ ಗೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 4,188 ಕ್ಯೂಸೆಕ್ ಒಳಹರಿವು ಬಂದಿದ್ದು. ಪ್ರಸ್ತುತ ಒಳಹರಿವು 4620 ಕ್ಯೂಸೆಕ್ಗೆ ಆಗಿದೆ.
ಕಾಲುವೆಗಳಿಗೆ 140 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಭತ್ತಿ ಹೋಗಿದ್ದ ತುಂಗಭದ್ರಾ ಜಲಾಶಯಕ್ಕೆ ಅಲ್ಪ ಪ್ರಮಾಣದ ಒಳ ಹರಿವಿನಿಂದಾಗಿ ಜಲಾಶಯಕ್ಕೆ ಜೀವಕಳೆ ಬಂದಂತಾಗಿದೆ.
ಮಲೆನಾಡು ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಮುಂದಿನ ಎರಡು-ಮೂರು ದಿನಗಳಲ್ಲಿ ಜಲಾಶಯದ ಒಳಹರಿವಿನ ಪ್ರಮಾಣ ಕೂಡ ಹೆಚ್ಚಳವಾಗಲಿದೆ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷದ ಇದೇ ದಿನ ಜಲಾಶಯದಲ್ಲಿ 76.713 ಟಿಎಂಸಿ ನೀರಿನ ಸಂಗ್ರಹ ದಾಖಲಾಗಿತ್ತು. ಜಲಾಶಯ ಭರ್ತಿಯಾದರೆ ಎರಡು ಬೆಳೆಗಳಿಗೆ ನೀರು ಸಿಗುವ ನಿರೀಕೆಯಲ್ಲಿ ರೈತರಿದ್ದಾರೆ.



























