
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ : ಮಾ.04 ತಾಲ್ಲೂಕಿನ ತಂಬ್ರಹಳ್ಳಿಯ ಐತಿಹಾಸಿಕ ಶ್ರೀ ಬಂಡೆ ರಂಗನಾಥ ಸ್ವಾಮಿ ರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ನಿಮಿತ್ತವಾಗಿ ಬೆಟ್ಟದಲ್ಲಿ ನೆಲೆಸಿರುವ ರಂಗನಾಥ ಸ್ವಾಮಿ ಹಾಗೂ ಲಕ್ಷ್ಮೀ ದೇವಿಗೆ ವಂಶಪಾರಂಪರ್ಯ ಧರ್ಮಕರ್ತರ ಕುಟುಂಬದಿಂದ ಹಾಗೂ ಅರ್ಚಕರಿಂದ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ಜರುಗಿದವು. ಹುಣ್ಣಿಮೆಯ ದಿನ ಬೆಳಿಗ್ಗೆ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.
ದೇವಸ್ಥಾನ ಸಮಿತಿಯ ಗೌರವ ಅಧ್ಯಕ್ಷರಾದ ಡಾ. ಶ್ರೀ ಮಹೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಸಾಯಂಕಾಲ ಸರ್ವಾಭರಣ ಅಲಂಕೃತ ಗೊಂಡ ಉತ್ಸವ ಮೂರ್ತಿಯನ್ನು ಬೆಟ್ಟದಿಂದ ಕೆಳಗಡೆ ರಥ ಎಳೆಯುವ ಬೀದಿಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ರಥದ ಸುತ್ತಲೂ 3 ಸುತ್ತು ಪ್ರದಕ್ಷಿಣೆ ಹಾಕಿಸಿದ ಬಳಿಕ ನಡೆದ ಪಟಾಕ್ಷಿ ಹರಾಜು ಪ್ರಕ್ರಿಯೆಯಲ್ಲಿ ಕೊಪ್ಪಳದ ರಂಗಪ್ಪ ಪೂಜಾರ ಇವರು 301101 ರೂ.ಗಳಿಗೆ ಪಡೆದುಕೊಂಡರು.
ವಿವಿಧ ಹೂವಿನ ಮಾಲೆ ಹಾಕಿ ರಥವನ್ನು ಸುಂದರಗೊಳಿಸಲಾಗಿತ್ತು, ಬಾಳೆ ದಿಂಡು ಹಾಗೂ ಬಣ್ಣದ ವಸ್ತ್ರಗಳಿಂದ ಅಲಂಕೃತಗೊಂಡ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಲಕ್ಷ್ಮೀ.. ರಮಣಾ..ಗೋವಿಂದ… ಗೋವಿಂದಾ. ಎಂಬ ನರೆದ ಭಕ್ತರು ಜಯಘೋಷ ಮೊಳಗಿಸುತ್ತಿದ್ದಂತೆ ರಥೋತ್ಸವ ಮುಂದೆ ಚಲಿಸಿತು. ಸುತ್ತಮುತ್ತ ಗ್ರಾಮದಿಂದ ಅಗಮಿಸಿದ ಭಕ್ತರು ಬಾಳೆ ಹಣ್ಣು ಉತ್ತುತ್ತಿ ರಥಕ್ಕೆ ಎಸೆದು ಭಕ್ತಿ ಭಾವ ಮೆರೆದರು.
ರಥೋತ್ಸವ ಹಿನ್ನೆಲೆಯಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ಸಿಬ್ಬಂದಿಯವರು ರಕ್ತ ದಾನ ಶಿಬಿರ ಹಮ್ಮಿಕೊಂಡಿದ್ದರು.ರಥೋತ್ಸವ ನಿಮಿತ್ಯ ತಂಬ್ರಹಳ್ಳಿಯ ಪೋಲಿಸ್ ಠಾಣೆಯ ಸಿಬ್ಬಂದಿಯವರು ಸೂಕ್ತ ಬಂದೋಬಸ್ತ ಕಲ್ಪಿಸಿದ್ದರು.

























