
ಪುತ್ತೂರು; ಜನಾರೋಗ್ಯದ ದೃಷ್ಟಿಯಿಂದ ಜನತೆಯ ಮೂಲಭೂತ ವ್ಯವಸ್ಥೆಯಾಗಿರುವ ಸರ್ಕಾರಿ ಆಸ್ಪತ್ರೆಗಳ ಪ್ರಸ್ತುತ ಸ್ಥಿತಿ ಶೋಚನೀಯವಾಗಿದೆ. ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಕೊರತೆ ಹಾಗೂ ಸಿಬಂಧಿಗಳ ಕೊರತೆ ಎದ್ದು ಕಾಣುತ್ತದೆ. ಆದರೆ ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಎರಡೂ ಕೊರತೆಗಳೊಂದಿಗೆ ಬಹುಮುಖ್ಯವಾದ ಔಷಧಗಳ ಕೊರತೆ ಉಂಟಾಗಿದೆ. ದಕ ಜಿಲ್ಲೆಯಲ್ಲಿ ಆಸ್ಪತ್ರೆಯ ಎಲ್ಲಾ ವರ್ಗದ ಅಧಿಕಾರಿ-ಸಿಬಂದಿಗಳ ಒಟ್ಟು ೨೦೫೪ ಹುದ್ದೆಗಳಲ್ಲಿ ಬರೋಬ್ಬರಿ ೧೨೨೦ ಹುದ್ದೆಗಳು ಖಾಲಿಯಾಗಿವೆ. ಇದರಲ್ಲಿ ವೈದ್ಯಾಧಿಕಾರಿಗಳ ಹುದ್ದೆ ೭೭ ಖಾಲಿಯಾಗಿದೆ..!
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ಖಾಸಗಿ ಆಸ್ಪತ್ರೆಗಳತ್ತ ಬಡವರ್ಗದ ಜನತೆ ಮುಖಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸುಳ್ಯ ತಾಲೂಕಿನಲ್ಲಿ ೭ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ೭ ವೈದ್ಯಾಧಿಕಾರಿಗಳ ಹುದ್ದೆಯೂ ಖಾಲಿ. ಪುತ್ತೂರು ತಾಲೂಕಿನಲ್ಲಿ ಎಲ್ಲಾ ವೃಂದಗಳನ್ನೂ ಸೇರಿಸಿ ಒಟ್ಟು ೧೪೬ ಹುದ್ದೆಗಳಿವೆ. ಇದರಲ್ಲಿ ಕೇವಲ ೬೨ ಹುದ್ದೆಗಳು ಮಾತ್ರ ತುಂಬಿದ್ದು, ೮೪ ಹುದ್ದೆಗಳು ಖಾಲಿಯಾಗಿವೆ. ಪುತ್ತೂರು ತಾಲೂಕು ಸರ್ಕಾರಿ ಆಸ್ಪತೆಯಲ್ಲಿ ೧೫ ವೈದ್ಯಾಧಿಕಾರಿಗಳು ಇರಬೇಕಿದ್ದು, ಈ ಪೈಕಿ ಕೇವಲ ೯ ಮಂದಿ ಮಾತ್ರ ಇದ್ದಾರೆ. ಅದರಲ್ಲಿಯೂ ಒಂದು ಹೊರಗುತ್ತಿಗೆ ಆಧಾರಿತವಾಗಿದೆ. ಕಡಬ ತಾಲೂಕಿನಲ್ಲಿ ಸಮುದಾಯ ಆಸ್ಪತ್ರೆಯಲ್ಲಿ ದಂತ ವೈದ್ಯರೊಬ್ಬರನ್ನು ಬಿಟ್ಟರೆ ಉಳಿದ ೫ ವೈದ್ಯಾಧಿಕಾರಿಗಳ ಹುದ್ದೆಯೂ ಖಾಲಿಯಾಗಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು ೧೮೦ ಮಂದಿ ವೈದ್ಯಾಧಿಕಾರಿಗಳ ಹುದ್ದೆ ಇದೆ. ಆದರೆ ಅದರಲ್ಲಿ ಕೇವಲ ಅರ್ಧದಷ್ಟು ಮಾತ್ರ ಹುದ್ದೆಗಳು ಭರ್ತಿಯಾಗಿವೆ. ಆಸ್ಪತ್ರೆಗಳಲ್ಲಿ ಇರಬೇಕಾದ ಫಾರ್ಮಾಸಿಸ್ಟ್ ಗಳ ಬದಲಿಗೆ ವೈದ್ಯರಿಗೆ ನಿರ್ವಹಣೆ ಮಾಡಬೇಕು ಎಂದು ಇಲಾಖೆ ಸೂಚಿಸಿದೆ. ಲ್ಯಾಬ್ ಟೆಕ್ನೇಷಿಯನ್‌ಗಳ ಹುದ್ದೆಯೂ ಖಾಲಿಯಾಗಿದೆ.
ಖಾಸಗಿ ಸೇವೆಗೂ ಅರ್ಧಚಂದ್ರ..!
ಈ ನಡುವೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಮ್ಮ ಕರ್ತವ್ಯದ ಅವಧಿಯ ಬಳಿಕ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಇತ್ತು. ಆದರೆ ಇದೀಗ ಈ ವಿಚಾರದಲ್ಲಿಯೂ ಸಮಸ್ಯೆ ತಲೆದೋರಿದೆ. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ ಹೊರರೋಗಿಗಳಷ್ಟೇ ಚಿಕಿತ್ಸೆ ನೀಡಬೇಕು ಎಂಬ ಹೊಸ ನಿಯಮವೊಂದನ್ನು ಇಲಾಖೆ ಮುಂದಿಟ್ಟಿದೆ. ಒಳರೋಗಿಗಳಿಗೆ ಈ ವೈದ್ಯಾಧಿಕಾರಿಗಳನ್ನು ಚಿಕಿತ್ಸೆ ಮಾಡಲು ಇದ್ದ ಅವಕಾಶವನ್ನು ಕಿತ್ತುಕೊಳ್ಳುವ ಚಿಂತನೆ ನಡೆಸಲಾಗಿದೆ.
ಸಮುದಾಯ ಆಸ್ಪತ್ರೆಗಳಲ್ಲಿ ಎಂಬಿಬಿಎಸ್ ವೈದ್ಯರು ಸಾಕು ಎಂಬ ಚಿಂತನೆಯೂ ಆರೋಗ್ಯ ಇಲಾಖೆಯದ್ದಾಗಿದೆ. ಇಲ್ಲಿರುವ ತಜ್ಞವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ಬದಲಾಯಿಸುವ ಯೋಚನೆ ಮಾಡಲಾಗುತ್ತಿದೆ. ಸಾಕಷ್ಟು ವ್ಯವಸ್ಥೆಗಳಿರುವ ಈ ಸಮುದಾಯ ಆಸ್ಪತ್ರೆಗಳಲ್ಲಿ ತಜ್ಞವೈದ್ಯರ ಅವಶ್ಯಕತೆ ಇದೆ. ಹಾಗಿದ್ದರೂ ಆರೋಗ್ಯ ಇಲಾಖೆ ಯಾವ ಆಧಾರದಲ್ಲಿ ಇಂತಹದ್ದೊಂದು ಚಿಂತನೆ ಮಾಡಿದೆ ಎಂಬುವುದು ಯೋಚನೆಗೆ ನಿಲುಕದ್ದಾಗಿದೆ.
ಬಡವರ್ಗದ ಬಹುತೇಕ ಮಂದಿ ಖಾಸಗಿ ಆಸ್ಪತ್ರೆಗಳ ಬದಲಿಗೆ ಸರ್ಕಾಇ ಆಸ್ಪತ್ರೆಗಳನ್ನು ಆಶ್ರಯಿಸುತ್ತಾರೆ. ಅದು ತಾಲೂಕು ಆಸ್ಪತ್ರೆಯಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ತನಕ. ಆದರೆ ಇಲ್ಲಿ ವೈದ್ಯರೂ ಇಲ್ಲ.. ಔಷಧಿಯೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾದರೆ ಮುಂದೆ ಸರ್ಕಾರಿ ಆಸ್ಪತ್ರೆಗಳು ಪಾಳುಬೀಳುವ ಅಪಾಯ ಸೃಷ್ಟಿಯಾಗಲಿದೆ. ಅದರಲ್ಲೂ ಗ್ರಾಮೀಣ ಭಾಗದ ಜನತೆಯ ಪಾಲಿಗೆ ಸರ್ಕಾರಿ ಆಸ್ಪತ್ರೆಗಳು ಮರೀಚಿಕೆಯಾಗುವ ಸ್ಥಿತಿ ನಿರ್ಮಾಣವಾಗಲಿದೆ. ಇದು ಜನಾರೋಗ್ಯಕ್ಕೆ ಮಾರಕವಾಗಿ ಪರಿಣಮಿಸಲಿದೆ.
ಔಷಧಿ ಕೊರತೆ ಹೆಚ್ಚಾಗಿದೆ
ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳು ಕೇವಲ ವೈದ್ಯಾಧಿಕಾರಿಗಳು ಮತ್ತು ನೌಕರರ ಕೊರತೆಯಿಂದ ಮಾತ್ರ ಬಳಲುತ್ತಿಲ್ಲ. ಔಷಧಗಳ ಕೊರತೆಯಿಂದಲೂ ಬಳಲುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳು ಸೇರಿ ೧೨ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾವು ಪ್ರತಿಭಟನೆಗೆ ಇಳಿಯುತ್ತಿದ್ದೇವೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂಧಿಸುತ್ತದೆ ಎಂಬ ನಂಬಿಕೆ ಇದೆ- ಡಾ.ದೀಪಕ್ ರೈ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ.
ಮೇಘಾ ಪಾಲೆತ್ತಾಡಿ

























