
ಸಂಜೆವಾಣಿ ವಾರ್ತೆ
ತಿ.ನರಸೀಪುರ ಆ.30- ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದರ ಜೊತೆಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಕಾರ್ಯಕರ್ತರು ಸಂಘಟಿತರಾಗಿ ಶ್ರಮಿಸಬೇಕು ಎಂದು ಶಾಸಕ ಡಾ.ಎಚ್.ಸಿ. ಮಹದೇವಪ್ಪ ಕರೆ ನೀಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವತಿಯಿಂದ ಹಮ್ಮಿಕೊಂಡಿರುವ ಸಂಘಟನ್ ಸೃಜನ್ ಅಭಿಯಾನ?2ರ ಅಂಗವಾಗಿ ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬ್ಲಾಕ್ನಿಂದ ಪಂಚಾಯಿತಿ ಮಟ್ಟದವರೆಗೆ ಬಲಪಡಿಸಬೇಕು. ಕಡಾಕೊಳ ಸೇರಿದಂತೆ ವಿವಿಧ ಬ್ಲಾಕ್ಗಳ ವ್ಯಾಪ್ತಿಯಲ್ಲಿ ಹಿರಿಯರು, ಯುವಕರು ಹಾಗೂ ಮಹಿಳಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಗೆ ಒಮ್ಮತದ ಪಟ್ಟಿ ಸಿದ್ಧಪಡಿಸಬೇಕು. ಪಂಚಾಯಿತಿ ಮಟ್ಟದಲ್ಲಿಯೂ ಸಭೆಗಳನ್ನು ನಡೆಸಿ ಸಂಘಟನೆಯನ್ನು ವಿಸ್ತರಿಸಬೇಕು. ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ, ಸಣ್ಣಪುಟ್ಟ ಸಮಸ್ಯೆಗಳನ್ನು ಪರಸ್ಪರ ಚರ್ಚೆಯ ಮೂಲಕ ಬಗೆಹರಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ರಕ್ಷಿಸುವುದು ಅತ್ಯಂತ ಮಹತ್ವದ್ದಾಗಿದೆ. ಜನಾದೇಶದ ಪಾವಿತ್ರ್ಯ ಹಾಗೂ ಮತದಾನದ ಹಕ್ಕಿನ ರಕ್ಷಣೆಯ ಕುರಿತು ಕಾರ್ಯಕರ್ತರು ಜಾಗೃತಿ ಮೂಡಿಸಬೇಕು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಸಿ ಜನರ ಹಕ್ಕುಗಳು ಹಾಗೂ ಸಂವಿಧಾನದ ಆಶಯಗಳ ಕುರಿತು ಅರಿವು ಮೂಡಿಸಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ತಾವು ಸಾಮಾಜಿಕ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವ ಕ್ರಮಕ್ಕೆ ಆದ್ಯತೆ ನೀಡಲಾಗಿತ್ತು. ಸಂವಿಧಾನ ದಿನಾಚರಣೆ ಮತ್ತು ಪ್ರಜಾಪ್ರಭುತ್ವ ದಿನಾಚರಣೆಗಳ ಮೂಲಕ ಸಂವಿಧಾನದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಸಲಾಗಿತ್ತು ಎಂದು ಸ್ಮರಿಸಿದರು.
ತಿ.ನರಸೀಪುರ ಕ್ಷೇತ್ರದಲ್ಲಿ ಕುಡಿಯುವ ನೀರು, ಕಾವೇರಿ ಮತ್ತು ಕಪಿಲಾ ನದಿಗಳ ವ್ಯಾಪ್ತಿಯ ನೀರಾವರಿ ಯೋಜನೆಗಳು, ರಸ್ತೆ ಹಾಗೂ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಬರಗಾಲದಂತಹ ಸಂಕಷ್ಟದ ಸಂದರ್ಭಗಳಲ್ಲಿಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನಪರ ಕಾರ್ಯಕ್ರಮಗಳನ್ನು ತಲುಪಿಸಲು ಪ್ರಯತ್ನಿಸಲಾಗಿದೆ. ಕಳೆದ ನಾಲ್ಕು ದಶಕಗಳಿಂದ ಕ್ಷೇತ್ರದ ಜನತೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತೋರಿರುವ ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರತಿಪಾದಿಸಲಾದ `ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಘೋಷಣೆಯ ಆಶಯದಂತೆ ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಲುಪಿಸಬೇಕು. ಬಡವರು, ರೈತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸಿ ಪಕ್ಷದ ಸಂಘಟನೆಯನ್ನು ಬೂತ್ಮಟ್ಟದಿಂದ ಬಲಪಡಿಸಬೇಕು. ಮುಂಬರುವ ಚುನಾವಣಾ ಸವಾಲುಗಳನ್ನು ಎದುರಿಸಲು ಕಾರ್ಯಕರ್ತರು ಈಗಿನಿಂದಲೇ ಸಿದ್ಧರಾಗಬೇಕು ಎಂದು ಡಾ. ಎಚ್.ಸಿ.ಮಹದೇವಪ್ಪ ಕರೆ ನೀಡಿದರು.
ಕಾರ್ಯಕರ್ತರ ಅಭಿಪ್ರಾಯಕ್ಕೆ ಆದ್ಯತೆ: ಬೀರಿಹುಂಡಿ ಬಸವಣ್ಣ ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಮಾತನಾಡಿ, ಸಂಘಟನ್ ಸೃಜನ್ ಅಭಿಯಾನ?2ರ ಮುಖ್ಯ ಉದ್ದೇಶ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸದೃಢವಾಗಿ ಕಟ್ಟುವುದಾಗಿದೆ. ಪಕ್ಷದ ಸಂಘಟನೆಯಲ್ಲಿ ಯುವಕರು ಮತ್ತು ಮಹಿಳೆಯರಿಗೆ ಹೆಚ್ಚಿನ ಅವಕಾಶ ಹಾಗೂ ಜವಾಬ್ದಾರಿಗಳನ್ನು ನೀಡಬೇಕು. ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಪಕ್ಷದ ಸಂಘಟನಾ ಶಕ್ತಿಯನ್ನು ಹೆಚ್ಚಿಸಬೇಕು ಎಂದರು.
2028ರ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ 2029ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಸಂಘಟನೆಗೆ ಒತ್ತು ನೀಡಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಸಮನ್ವಯದಿಂದ ಶ್ರಮಿಸಬೇಕು ಎಂದು ತಿಳಿಸಿದರು.
ಸಂಘಟನಾ ನೇಮಕಾತಿಗೆ ಅಭಿಪ್ರಾಯ ಸಂಗ್ರಹ: ಮುದ್ದಹನುಮೇಗೌಡ ಕೆಪಿಸಿಸಿ ವೀಕ್ಷಕರು ಹಾಗೂ ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, ಸಂಘಟನ್ ಸೃಜನ್ ಅಭಿಯಾನವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪರಿಕಲ್ಪನೆಯಾಗಿದ್ದು, ಕಾರ್ಯಕರ್ತರ ಅಭಿಪ್ರಾಯದ ಆಧಾರದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಹಿಂದೆ ನಡೆದ ಸಂಘಟನ್ ಸೃಜನ್ ಅಭಿಯಾನ?1ರ ಸಂದರ್ಭದಲ್ಲಿ ಜಾರ್ಖಂಡ್ ರಾಜ್ಯದ ಕಾಂಗ್ರೆಸ್ ನಾಯಕ ರಾಜೇಶ್ ಠಾಕೂರ್ ಅವರೊಂದಿಗೆ ಸಭೆ ನಡೆಸಿದ್ದನ್ನು ಸ್ಮರಿಸಿದ ಅವರು, ಪ್ರಸ್ತುತ ಅಭಿಯಾನದ ಮೂಲಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಹಾಗೂ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಾತಿ ಕುರಿತು ಸ್ಥಳೀಯ ಮುಖಂಡರು, ಶಾಸಕರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೆಪಿಸಿಸಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
2028ರ ವಿಧಾನಸಭೆ ಮತ್ತು 2029ರ ಲೋಕಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಮಹದೇವಪ್ಪ ಅವರಿಗೆ ಸೂಕ್ತ ಸ್ಥಾನಮಾನ ನೀಡಿ: ಬನ್ನೂರು ಡಾ. ಜ್ಞಾನಪ್ರಕಾಶ್
ಮೈಸೂರು ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಕೆ.ಜ್ಞಾನಪ್ರಕಾಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಡಾ. ಎಚ್.ಸಿ. ಮಹದೇವಪ್ಪ ಅವರ ನಾಯಕತ್ವ ಹಾಗೂ ದಲಿತ ಸಮುದಾಯದ ಬೆಂಬಲ ಮಹತ್ವದ ಪಾತ್ರ ವಹಿಸಿದೆ. ಪಕ್ಷದ ಗೆಲುವಿಗೆ ಸಮುದಾಯ ನೀಡಿರುವ ಕೊಡುಗೆ ಮತ್ತು ಮಹದೇವಪ್ಪ ಅವರ ರಾಜಕೀಯ ಅನುಭವವನ್ನು ಗುರುತಿಸಿ ಅವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ಸಂವಿಧಾನದ ಪೀಠಿಕೆಯನ್ನು ಓದುವುದರ ಜೊತೆಗೆ ಅದರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಬಲಪಡಿಸಲು ಮಹದೇವಪ್ಪ ಅವರ ಅನುಭವ ಮತ್ತು ನಾಯಕತ್ವಕ್ಕೆ ಮನ್ನಣೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಕೆಪಿಸಿಸಿ ವೀಕ್ಷಕರಾದ ತ್ಯಾಗರಾಜು, ಎಸ್. ಸಿ.ಬಸವರಾಜು, ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ಲತಾ ಜಗದೀಶ್, ಮಂಜುನಾಥನ್, ಬಿ.ಎಂ.ಶಿವಮಲ್ಲಪ್ಪ, ಎಚ್.ಎನ್.ಉಮೇಶ್, ಬನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಚನ್ನಕೇಶವ, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಚಂದನ್ ಗೌಡ, ಕುಕ್ಕೂರು ಗಣೇಶ್, ಸೋಸಲೆ ಪರಶಿವಮೂರ್ತಿ, ಉಕ್ಕಲಗೆರೆ ಬಸವಣ್ಣ, ಎಂ. ಮಲ್ಲಿಕಾರ್ಜುನಸ್ವಾಮಿ, ಆಪ್ತ ಸಹಾಯಕ ಬಿ. ಬಸವರಾಜು, ಎಂ.ಬಿ. ಸಾಗರ್, ವೀಣಾ ಶಿವಕುಮಾರ್, ಮುನಾವರ್ ಪಾಷ, ಕನ್ನಹಳ್ಳಿ ಲಕ್ಷ್ಮಣ್, ಎ.ಬಿ.ಮಂಜುನಾಥ್, ಹಿರಿಯೂರು ನವೀನ್ (ವೀರೇಂದ್ರ), ರಾಮಲಿಂಗಯ್ಯ, ಕಲಿಯೂರು ಶಿವಣ್ಣ, ಕೊಳತ್ತೂರು ಕುಮಾರ್, ಮಲಿಯೂರು ದೊಳ್ಳಯ್ಯ, ವಾಟಾಳು ಸೋಮಣ್ಣ, ಸುಜ್ಜಲೂರು ಶಿವಣ್ಣ, ದಕ್ಷಿಣಮೂರ್ತಿ, ಕಾವೇರಿಪುರ ಶಾಂತರಾಜು, ಹ್ಯಾಕನೂರು ಶಿವಕುಮಾರ್, ಕಲಿಯೂರು ಸಿದ್ದರಾಜು, ಬನ್ನೂರು ಶಿವು, ಮಲಿಯೂರು ಪ್ರಸನ್ನ, ಮಲ್ಲಯ್ಯ ನವಾಜ್ ಖಾನ್, ನಿಲಸೋಗೆ ಪ್ರದೀಪ್, ಎಮ್.3ರಂಗರಾಮು, ಸೇರಿದಂತೆ ಹಲವು ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
























