
ಬೆಂಗಳೂರು, ಅ.22: ನಗರದ ದ್ವಿಜಾ ಆರ್ಟ್ ಗ್ಯಾಲರಿಯಲ್ಲಿ ಅಂತರಂಗ ದಿ ನೆಸ್ಟೆಡ್ ಸ್ಟೋರೀಸ್' ಎಂಬ ವಿಶಿಷ್ಟ ಕಲಾ ಪ್ರದರ್ಶನ ಅಕ್ಟೋಬರ್ 23ರಿಂದ 25ರವರೆಗೆ ನಡೆಯಲಿದೆ. ಕಲಾವಿದರಾದ ಶಶ್ವತಿ ದೇವಶರ್ಮಾ ಮತ್ತು ನಂದಿನಿ ಬಜೇಕಲ್ ಅವರ ಕಲಾಕೃತಿಗಳನ್ನು ಒಳಗೊಂಡಿರುವ ಈ ಪ್ರದರ್ಶನವು ಭೂದೃಶ್ಯ, ನೆನಪು, ಭಾವನೆ ಮತ್ತು ಮಾನವ ಪ್ರಜ್ಞೆಯ ಆಂತರಿಕ ಆಯಾಮಗಳನ್ನು ಕಲೆಯ ಮೂಲಕ ಅನಾವರಣಗೊಳಿಸಲಿದೆ. ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ ಅಕ್ಟೋಬರ್ 23ರಂದು ಸಂಜೆ 6ರಿಂದ 8.30ರವರೆಗೆ ನಡೆಯಲಿದೆ. ಪ್ರದರ್ಶನವು ಮೂರು ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದ್ದು, ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ವೀಕ್ಷಿಸಬಹುದು. ಅಂತರಂಗ’ ಎಂಬ ಪರಿಕಲ್ಪನೆಯು ಬಾಹ್ಯ ಜಗತ್ತಿನ ದೃಶ್ಯಗಳ ಆಚೆಗೆ ಅಡಗಿರುವ ಮಾನಸಿಕ ಮತ್ತು ಭಾವನಾತ್ಮಕ ಅನುಭವಗಳನ್ನು ಅನ್ವೇಷಿಸುವ ಪ್ರಯತ್ನವಾಗಿದೆ. ಪ್ರತಿಯೊಂದು ಚಿತ್ರದಲ್ಲೂ ಮತ್ತೊಂದು ಕಥೆ, ಪ್ರತಿಯೊಂದು ನೆನಪಿನಲ್ಲೂ ಮತ್ತೊಂದು ನೆನಪು ಅಡಗಿರುತ್ತದೆ ಎಂಬ ಆಶಯದೊಂದಿಗೆ ಈ ಪ್ರದರ್ಶನ ರೂಪುಗೊಂಡಿದೆ.
ವಾಸ್ತುಶಿಲ್ಪದ ಹಿನ್ನೆಲೆ ಹೊಂದಿರುವ ಶಶ್ವತಿ ದೇವಶರ್ಮಾ ಅವರು ಭಾರತೀಯ ಶಾಸ್ತ್ರೀಯ ನೃತ್ಯ, ಸಂಗೀತ, ಕಾವ್ಯ ಮತ್ತು ಪ್ರಕೃತಿಯಿಂದ ಪ್ರೇರಣೆ ಪಡೆದು ಕಲಾಕೃತಿಗಳನ್ನು ರಚಿಸುತ್ತಾರೆ. ಅವರ ಅಮೂರ್ತ ಮಿಶ್ರ ಮಾಧ್ಯಮದ ಚಿತ್ರಗಳಲ್ಲಿ ಕ್ರಮ ಮತ್ತು ಅಕ್ರಮ, ರಚನೆ ಮತ್ತು ಸ್ವಾಭಾವಿಕತೆ, ಬಣ್ಣ ಮತ್ತು ಖಾಲಿ ಜಾಗಗಳ ನಡುವಿನ ಸಂಬಂಧವನ್ನು ವಿಭಿನ್ನವಾಗಿ ಅಭಿವ್ಯಕ್ತಿಸಲಾಗಿದೆ. ಇಬ್ಬರೂ ಕಲಾವಿದರ ಕಲಾಭಿವ್ಯಕ್ತಿಗಳು ವಿಭಿನ್ನವಾಗಿದ್ದರೂ, ಬಾಹ್ಯ ಜಗತ್ತು ಮತ್ತು ಮಾನವನ ಅಂತರಂಗದ ನಡುವಿನ ಸಂಬಂಧವನ್ನು ಅನ್ವೇಷಿಸುವುದು ಈ ಪ್ರದರ್ಶನದ ಪ್ರಮುಖ ಆಶಯವಾಗಿದೆ. ದೇವಶರ್ಮಾ ಅವರು ಅಮೂರ್ತತೆ, ಬಣ್ಣ ಮತ್ತು ಲಯದ ಮೂಲಕ ಅಂತರಂಗವನ್ನು ಕಟ್ಟಿಕೊಟ್ಟರೆ, ಬಜೇಕಲ್ ಅವರು ಪ್ರಕೃತಿಯ ಭೂದೃಶ್ಯಗಳ ಮೂಲಕ ಆಂತರಿಕ ಅನುಭವಗಳನ್ನು ಅನಾವರಣಗೊಳಿಸುತ್ತಾರೆ.



















