
ಕನ್ನಡ ಸಾಹಿತ್ಯದ ಆದಿಕವಿ ಪಂಪ ಅವರ ಚಿಂತನೆಗಳನ್ನು ಬೆಳ್ಳಿ ಪರದೆಗೆ ತಂದಿರುವ ‘ಮಹಾಕವಿ’ ಚಿತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗೌರವ ಲಭಿಸಿದೆ. ಬೆಳಗಾವಿಯ ಪ್ರಭು ಯತ್ನಟ್ಟಿ ನಿರ್ಮಿಸಿ, ಹಿರಿಯ ಸಾಹಿತಿ ಹಾಗೂ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಈ ಚಿತ್ರ, ಹಾಲಿವುಡ್ ಗೋಲ್ಡನ್ ಏಜ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದ್ದು, ಇದೀಗ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ.
ಹತ್ತನೇ ಶತಮಾನದ ಕನ್ನಡದ ಆದಿಕವಿ ಪಂಪ ಅವರ ಕಾವ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಆಧರಿಸಿ ನಿರ್ಮಾಣವಾಗಿರುವ ಈ ಚಿತ್ರ, ಜಾತಿ ವ್ಯವಸ್ಥೆಯ ವಿರುದ್ಧ ಪಂಪ ಪ್ರತಿಪಾದಿಸಿದ ಪರಿಕಲ್ಪನೆ, ಸೃಜನಶೀಲ ಸ್ವಾತಂತ್ರ್ಯದ ಮಹತ್ವ ಹಾಗೂ ಪ್ರಭುತ್ವದ ಎದುರು ಪ್ರತಿನಾಯಕತ್ವದ ವಿಚಾರಗಳನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ.
ಚಿತ್ರದಲ್ಲಿ ಪಂಪ ಕವಿಯ ಪಾತ್ರವನ್ನು ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದಾರೆ. ಜೊತೆಗೆ ಸುಂದರರಾಜ್, ಅನುಷಾ ರೈ, ಕುಮಾರ್ ಗೋವಿಂದ್, ಪ್ರಮೀಳಾ ಜೋಷಾಯ್, ಶೀಲಾ, ಆಕಾಂಕ್ಷ್ ಬರಗೂರು, ಸುಂದರರಾಜ ಅರಸು, ಹನುಮಂತೇಗೌಡ, ರಾಘವ್, ರಾಜಪ್ಪ ದಳವಾಯಿ, ಶಾಂತರಾಜ್, ಬಾಲಕೃಷ್ಣ ಬರಗೂರು, ಚಲಪತಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆ ಹಾಗೂ ಹೊಸ್ಮನೆ ಮೂರ್ತಿ ಕಲಾ ವಿನ್ಯಾಸ ನೀಡಿದ್ದಾರೆ. ನಟರಾಜ್ ಶಿವು ಮತ್ತು ಪ್ರವೀಣ್ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಚಿತ್ರಕಥೆ, ಸಂಭಾಷಣೆ, ಗೀತೆ ರಚನೆ ಮತ್ತು ನಿರ್ದೇಶನವನ್ನು ಬರಗೂರು ರಾಮಚಂದ್ರಪ್ಪ ವಹಿಸಿಕೊಂಡಿರುವ ‘ಮಹಾಕವಿ’ ಚಿತ್ರ, ಕನ್ನಡ ಸಾಹಿತ್ಯದ ವೈಚಾರಿಕ ಶ್ರೀಮಂತಿಕೆಯನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಗುರುತಿಸಿಕೊಂಡಿದೆ. ಹಾಲಿವುಡ್ ಗೋಲ್ಡನ್ ಏಜ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸೆಮಿಫೈನಲ್ ಪ್ರವೇಶದಿಂದ ಚಿತ್ರತಂಡದಲ್ಲಿ ಸಂತಸ ಮನೆಮಾಡಿದೆ.



























