
ಮಂಗಳೂರು- ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತ ಅಧಿಕಾರಿಗಳು ಸೆಪ್ಟೆಂಬರ್ ೯ ರ ಬುಧವಾರ ದಕ್ಷಿಣ ಕನ್ನಡ, ಸುಳ್ಯ ಮತ್ತು ಬೆಳ್ತಂಗಡಿ ತಾಲ್ಲೂಕುಗಳ ಆರು ಗ್ರಾಮ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ , ನೆಕ್ಕಿಲಾಡಿ ಗ್ರಾಮ ಪಂಚಾಯತ್, ಸುಳ್ಯ ತಾಲೂಕಿನ ಕಲ್ಮಡ್ಕ , ಗುತ್ತಿಗಾರು ಗ್ರಾಮ ಪಂಚಾಯತ್ ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಲಾಯಿಲ ಗ್ರಾಮ ಪಂಚಾಯತ್ ಸೇರಿ ಒಟ್ಟು ೦೬ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿದರು.
ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಅನಿರೀಕ್ಷಿತ ತಪಾಸಣೆಗಳನ್ನು ನಡೆಸಲಾಯಿತು.
ತಂಡದಲ್ಲಿ ಮಂಗಳೂರು ಲೋಕಾಯುಕ್ತ ಘಟಕದ ಉಪ ಪೊಲೀಸ್ ವರಿಷ್ಠಾಧಿಕಾರಿ ಡಾ.ಗಣ ಪಿ. ಕುಮಾರ್; ಸುರೇಶ್ ಕುಮಾರ್ ಪಿ ಮತ್ತು ಪೊಲೀಸ್ ನಿರೀಕ್ಷಕಿ ಭಾರತಿ ಜಿ; ಕಾರವಾರ ಲೋಕಾಯುಕ್ತ ಘಟಕದ ಉಪ ಪೊಲೀಸ್ ವರಿಷ್ಠಾಧಿಕಾರಿ ಧನ್ಯಾ ನಾಯಕ್; ಪೊಲೀಸ್ ನಿರೀಕ್ಷಕ ರವಿ ಎನ್.ಎನ್; ಉಡುಪಿ ಲೋಕಾಯುಕ್ತ ಘಟಕದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಲ ಮೂರ್ತಿ ರಾವ್ ವಿ.ಎಸ್; ಮತ್ತು ಪೊಲೀಸ್ ನಿರೀಕ್ಷಕ ಮಂಜುನಾಥ್ ಮತ್ತು ಇತರ ಸಿಬ್ಬಂದಿ ಇದ್ದರು
ಲೋಕಾಯುಕ್ತ ಅಧಿಕಾರಿಗಳು ತಪಾಸಣೆಯ ಸಮಯದಲ್ಲಿ ಗುರುತಿಸಲಾದ ನ್ಯೂನತೆಗಳ ಕುರಿತು ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಪಿಡಿಒ ವಿರುದ್ದ ಸಾರ್ವಜನಿಕರಿಂದ ಆರೋಪದ ಸುರಿಮಳೆ
ಉಪ್ಪಿನಂಗಡಿ ಗ್ರಾಮಪಂಚಾಯಿತಿ ಕಚೇರಿಗೆ ಬುಧವಾರ ಧಿಡೀರ್ ದಾಳಿ ನಡೆಸಿರುವ ಲೋಕಾಯುಕ್ತ ತಂಡ ಕಚೇರಿಯಲ್ಲಿ ವಿವಿಧ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಲೋಕಾಯುಕ್ತ ಡಿವೈಎಸ್ಪಿ ಗಾನಾ ಕುಮಾರ್ ನೇತೃತ್ವದಲ್ಲಿ ಬಂದಿರುವ ಲೋಕಾಯುಕ್ತ ತಂಡ ಕಡತಗಳ ಪರಿಶೀಲನೆ ನಡೆಸಿದ್ದು, ಸಾರ್ವಜನಿಕರಿಂದ ಗ್ರಾಮಪಂಚಾಯಿತಿಯ ಭ್ರಷ್ಟಾಚಾರದ ವಿರುದ್ಧ ೧೮ ದೂರುಗಳನ್ನು ಸ್ವೀಕರಿಸಿತು. ಈ ದೂರುಗಳನ್ನು ಸಂಬಂಧಪಟ್ಟ ಇಲಾಖೆಯ ಮುಖ್ಯಾಧಿಕಾರಿಗಳಿಗೆ ನೀಡಿ ತನಿಖೆ ನಡೆಸಿ ಕ್ರಮಕೈಗೊಳ್ಳುವ ಭರವಸೆಯನ್ನು ಲೋಕಾಯುಕ್ತ ಡಿವೈಎಸ್ಪಿ ಗಾನಾ ಕುಮಾರ್ ಸಾರ್ವಜನಿಕರಿಗೆ ನೀಡಿದರು.
ಪಂಜಳದ ಶಾಲಿವಾಹನ ಪೆಟ್ರೋಲ್ ಪಂಪು ಮಾಲೀಕ ಚಂದ್ರಶೇಖರ ತಾಳ್ತಜೆ ಅವರು ಪೆಟ್ರೋಲ್ ಪಂಪು ನವೀಕರಣಕ್ಕೆ ಅರ್ಜಿಯನ್ನು ಗ್ರಾಮಪಂಚಾಯಿತಿಯಲ್ಲಿ ಸ್ವೀಕರಿಸುತ್ತಿಲ್ಲ. ಹಲವು ತಿಂಗಳುಗಳಿಂದ ಇದಕ್ಕಾಗಿ ಅಲೆದಾಡುತ್ತಿದ್ದೇನೆ. ನನ್ನ ಮಾಲಕತ್ವದ ಕಟ್ಟಡಗಳ ತೆರಿಗೆಯನ್ನೂ ಸ್ವೀಕರಿಸುತ್ತಿಲ್ಲ. ಯಾಕೆ ಎಂದು ಸಿಬಂದಿಗಳಲ್ಲಿ ಪ್ರಶ್ನೆ ಮಾಡಿದರೆ ಅಭಿವೃದ್ಧಿ ಅಧಿಕಾರಿ ತೆಗೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ. ಲಂಚಕೊಟ್ಟರೆ ಮಾತ್ರ ಇಲ್ಲಿ ಕೆಲಸ ನಡೆಯುತ್ತದೆ ಎಂದು ಆರೋಪಿಸಿದರು. ಉಲ್ಲಾಸ್ ಬಾರ್ ಮಾಲಕ ಕರುಣಾಕರ ಸುವರ್ಣ ಅವರು ಬಾರ್ ಪರವಾನಿಗೆ ನವೀಕರಣ ಮಾಡಿಕೊಡುತ್ತಿಲ್ಲ ಎಂದು ದೂರಿದರು. ನಿರಾಳ ಬಾರ್ ಮಾಲಕ ನವೀನ್ ರೈ, ಕಾರ್ತಿಕ್ ಬಾರ್ ಮಾಲಕ ಆದಿತ್ಯ ಭಟ್ ಕೂಡಾ ಇದೇ ದೂರು ಹೇಳಿದರು. ಪಂಚಾಯಿತಿ ವಾಣಿಜ್ಯ ಸಂಕೀರ್ಣಗಳ ಕೊಠಡಿ ಏಲಂ ಅವಧಿ ಮುಗಿದಿದ್ದರೂ ಮರು ಏಲಂ ಮಾಡುತ್ತಿಲ್ಲ ಎಂದು ರಹಿಮಾನ್ ತಿಳಿಸಿದರು. ಉಪ್ಪಿನಂಗಡಿಯ ಕೆಲ ಮಂದಿ ವರ್ತಕರು ಗ್ರಾಮಪಂಚಾಯಿತಿನಲ್ಲಿ ಹಣದ ಅವ್ಯವಹಾರ ನಡೆಯುತ್ತಿದೆ. ಪರವಾನಿಗೆ ನವೀಕರಣಕ್ಕೆ ಬೃಹತ್ ಮೊತ್ತದ ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ದೂರು ನೀಡಿದರು.
ಸಾರ್ವಜನಿಕರಿಂದ ದೂರುಗಳನ್ನು ಆಲಿಸಿದ ಗಾನಾಕುಮಾರ್ ಅವರು ಯಾವುದೇ ಅರ್ಜಿಬಂದರೂ ತೆಗೆದುಕೊಂಡು ಅದಕ್ಕೆ ಬೇಕಾದ ಹಿಂಬರಹ ನೀಡುವುದು ನಿಮ್ಮ ಜವಾಬ್ದಾರಿ. ಪಿಡಿಒ ಹೇಳಿದರೂ ನೀವು ನಿಮ್ಮ ಕರ್ತವ್ಯ ಮಾಡಬೇಕು ಎಂದು ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಲಕ್ಷ ಲಂಚದ ಬೇಡಿಕೆ
ಉಪ್ಪಿನಂಗಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಪೆರಿಯಡ್ಕ ಜನತಾ ಕಾಲೊನಿ ನಿವಾಸಿಯಾಗಿರುವ ವಿಕಲಚೇತನರೊಬ್ಬರು ವೈಯುಕ್ತಿಕ ಕೆಲಸಗಳಿಗೆ ಸಂಬಂಧಿಸಿ ೧ ಲಕ್ಷ ಲಂಚದ ಬೇಡಿಕೆಯನ್ನು ಪಿಡಿಒಇಟ್ಟಿದ್ದಾರೆ ಎಂದು ದೂರಿದರು. ಅಶ್ರಫ್ ಎಂಬವರು ಲೋಕಾಯುಕ್ತಕ್ಕೆ ಈ ದೂರು ನೀಡಿ ಅಗತ್ಯ ದಾಖಲೆಗಳಿದ್ದರೂ ಕೆಲಸ ಮಾಡಿಕೊಡಲಿಲ್ಲ. ಬದಲಿಗೆ ಲಂಚ ಕೊಡಬೇಕು ಎಂದು ಬೇಡಿಕೆ ಇಟ್ಟರು. ಪಿಡಿಒ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾರ್ವಜನಿಕರಿಂದ ದೂರು ಸ್ವೀಕರಿಸಿದ ಲೋಕಾಯುಕ್ತ ಡಿವೈಎಸ್ಪಿ ಗಾನಾ ಕುಮಾರ್ ಅವರು ತನಿಖೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಗ್ರಾಮಪಂಚಾಯಿತಿ ಕಡತಗಳನ್ನು ಪರಿಶೀಲನೆ ಮಾಡಿದ್ದಾರೆ. ಆದರೆ ಪಿಡಿಒ ಮಾತ್ರ ಕಚೇರಿಯಲ್ಲಿ ಲಭ್ಯ ಇರಲಿಲ್ಲ. ಜಿಪಂ ಅಧಿಕಾರಿ ದಿವಾಕರ್ ಭಾಗವಹಿಸಿದ್ದರು.


































