Home ಜಿಲ್ಲೆ ಮೈಸೂರು ಮುಕ್ತ ವಿವಿ ಕುಲಪತಿ ವಜಾಗೊಳಿಸಲು ಆಗ್ರಹ

ಮುಕ್ತ ವಿವಿ ಕುಲಪತಿ ವಜಾಗೊಳಿಸಲು ಆಗ್ರಹ

ಸಂಜೆವಾಣಿ ನ್ಯೂಸ್
ಮೈಸೂರು: ಏ.02:-
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಶರಣಪ್ಪ ವಿ.ಹಲಸೆ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸಂಶೋಧಕರ ಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಮುಖಂಡರು ಹುಣಸೂರು ರಸ್ತೆಯಲ್ಲಿರುವ ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.


ಕುಲಪತಿ ಆರ್‍ಎಸ್‍ಎಸ್ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ಶೈಕ್ಷಣಿಕ ವಾತಾವರಣದಲ್ಲಿ ಕೇಸರಿಕರಣ ಮಾಡುತ್ತಿದ್ದಾರೆ. ಸಂಘ ಪರಿವಾರದ ಸಂಘಟನೆಗೆ ಕಾರ್ಯಕ್ರಮಕ್ಕೆ ಅವಕಾಶ ನೀಡಿ ಜೀವ ವಿರೋಧಿ ಸಿದ್ಧಾಂತಗಳ ಪ್ರಚಾರಕ್ಕೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ ಎಂದು ಆಪಾದಿಸಿದರು.


ದಸಂಸ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ಕರಾಮುವಿಯಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ಮತಾಂಧ ಶಕ್ತಿಗಳಿಗೆ ಸಹಕಾರ ನೀಡಲಾಗುತ್ತಿದೆ. ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ವಿವಿಯ ಎಲ್ಲ ಬೆಳವಣಿಗೆಗಳ ಬಗ್ಗೆ ಸಮಗ್ರವಾಗಿ ತನಿಖೆ ಮಾಡಬೇಕು. 15 ದಿನಗಳ ಒಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ವಿವಿಯ ಆಡಳಿತ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.


ಮುಖಂಡ ದ್ಯಾವಪ್ಪ ನಾಯಕ ಮಾತನಾಡಿ, ಹಲವಾರು ವರ್ಷಗಳಿಂದ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಮುಕ್ತ ವಿವಿಯನ್ನು ಉಳಿಸಬೇಕು. ತಪ್ಪಿತಸ್ಥರಿಗೆ ಶಿಸ್ತು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.


ಸಂಶೋಧಕರ ಸಂಘದ ಗೌರವ ಅಧ್ಯಕ್ಷ ಕಲ್ಲಹಳ್ಳಿ ಕುಮಾರ್, ಸೋಸಲೆ ಸಿದ್ದರಾಜು, ವರಹಳ್ಳಿ ಆನಂದ್, ಮುಖಂಡರಾದ ಚನ್ನಕೇಶವ, ಸೋಮಯ್ಯ ಮಲೆಯೂರು, ಆರ್ಟಿಸ್ಟ್ ನಾಗರಾಜು, ಸೋಮನಾಯ್ಕ, ಎಚ್.ಸಿ.ಪುಟ್ಟಣ್ಣ, ಮಣಿಯಯ್ಯ, ಕೆ.ಆರ್.ಗೋಪಾಲಕೃಷ್ಣ, ಕಿರಗೂರು ಸ್ವಾಮಿ, ಗಿರೀಶ್ ಮಾಚಳ್ಳಿ, ಮಲ್ಲೇಶ್ ಬಾಚಳ್ಳಿ, ಡಾ.ಪ್ರತಾಪ್, ಗಜೇಂದ್ರ ಚಿನ್ನಸ್ವಾಮಿ, ಸಾಮ್ರಾಟ್ ಸೇರಿದಂತೆ ಹಲವರು ಭಾಗವಹಿಸಿದ್ದರು.