
ಮಂಗಳೂರು-ಪ್ರಸಕ್ತ ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆಯನ್ನು ಅನುಷ್ಠಾನ ಮಾಡಲು ಇಂಡಸ್ ಇಂಡ್ ಜನರಲ್ ಇನ್ಸುರೆನ್ಸ್ ಕಂಪನಿ ಲಿ. (ರಿಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿ ಲಿ.) ಅನ್ನು ನಿಗಧಿಪಡಿಸಲಾಗಿರುತ್ತದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಭತ್ತದ ಬೆಳೆಗೆ ನೋಂದಣಿ ಪ್ರಾರಂಭವಾಗಿದ್ದು ಆಗಸ್ಟ್ ೧೪ ಕೊನೆಯ ದಿನ. ವಿಮಾ ಕಂತು ಒಂದು ಎಕ್ರೆಗೆ ರೂ.೬೧೧.೯೧/- (ರೈತರ ವಂತಿಕೆ ೨%) ಮತ್ತು ಒಟ್ಟು ವಿಮಾ ಮೊತ್ತ ಎಕ್ರೆಗೆ ರೂ.೩೦೫೯೫.೩೨/- ಆಗಿರುತ್ತದೆ. ಅರ್ಹ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹತ್ತಿರದ ಬ್ಯಾಂಕುಗಳಲ್ಲಿ ನಿಗದಿತ ದಿನಾಂಕದೊಳಗೆ ವಿಮಾ ಕಂತಿನ ಮೊತ್ತವನ್ನು ಪಾವತಿಸಬಹುದು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಯಾವುದೇ ಪ್ರಕೃತಿ ವಿಕೋಪಗಳಿಂದ/ ಹವಾಮಾನ ವೈಪರೀತ್ಯದಿಂದಾಗಿ ಶೇ.೭೫ ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ.೫೦ ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ, ಕಟಾವಿನ ನಂತರ ಬೆಳೆಯನ್ನು ಒಣಗಿಸಲು ಬಿಟ್ಟಂತ ಸಂದರ್ಭದಲ್ಲಿ ೨ ವಾರದೊಳಗೆ ಅಕಾಲಿಕ ಮಳೆ/ ಚಂಡಮಾರುತ ಸಹಿತ ಮಳೆಯಿಂದಾಗಿ ಕಟಾವು ಮಾಡಲಾದ ಬೆಳೆಯು ನಾಶವಾದರೆ, ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಭೂಕುಸಿತ, ಬೆಳೆ ಮುಳುಗಡೆ, ಆಲಿಕಲ್ಲು ಮಳೆಯಿಂದುಂಟಾಗುವ ನಷ್ಟವನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಯನ್ವಯ ಬೆಳೆ ನಷ್ಟ ನಿರ್ಧಾರ ಮಾಡಿ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ಇತ್ಯರ್ಥಪಡಿಸುತ್ತದೆ.
ಅಗತ್ಯವಿರುವ ದಾಖಲೆಗಳು: ಆಧಾರ್ ಕಾರ್ಡ್ , ಆರ್.ಟಿ.ಸಿ/ ಪಹಣಿ, ಬ್ಯಾಂಕ್ ಪಾಸ್‌ಬುಕ್, ಬೆಳೆ ಬಿತ್ತನೆ ದೃಢೀಕರಣ ಪತ್ರ, ಸ್ವಯಂ-ಘೋಷಣಾ ಪತ್ರ (ಸಾಲ ಪಡೆಯದ ರೈತರಿಗೆ ಕಡ್ಡಾಯವಾಗಿರುತ್ತದೆ- ನೋಂದಣಿ ಕೇಂದ್ರದಲ್ಲೇ ಸಿಗುತ್ತದೆ). ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆಯಲ್ಲಿ ಭಾಗವಹಿಸಲು ಇಚ್ಚಿಸದಿದ್ದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಕೊನೆಯ ದಿನಾಂಕದ ಒಂದು ವಾರದ ಮೊದಲು ಈ ಕುರಿತು ಮುಚ್ಚಳಿಕೆ ಪತ್ರ ನೀಡಿ ಬೆಳೆ ವಿಮೆಯಿಂದ ಕೈಬಿಡಲು ಕೋರುವುದು.
ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಹತ್ತಿರದ ರಾಷ್ಟ್ರೀಕೃತ/ ಸಹಕಾರಿ ಬ್ಯಾಂಕ್ ಶಾಖೆಗಳ ಮೂಲಕ ನಿಗದಿತ ಪ್ರೀಮಿಯಂ ಪಾವತಿಸಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ (ಖSಏ) ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















