
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ 26: ನಗರದ ಅನಂತಪುರ ರಸ್ತೆ ಬೈಪಾಸ್ನಿಂದ ವಿಆರ್ಎಲ್ ಗೋಡೌನ್ ಮೂಲಕ ಬೆಂಗಳೂರು ರಸ್ತೆಯವರೆಗೆ ಕಳೆದೊಂದು ವರ್ಷ ಹಿಂದೆ ಅರಣ್ಯ ಇಲಾಖೆ ವತಿಯಿಂದ ನೆಡಲಾಗಿದ್ದ ಹಲವು ಗಿಡಗಳು ಇತ್ತೀಚೆಗೆ ಸುರಿದ ಭಾರಿ ಬಿರುಗಾಳಿ ಮಳೆಯಿಂದ ಬಾಗಿರುವ ಘಟನೆ ಕಂಡುಬಂದಿದೆ.
ಸುಮಾರು 20ರಿಂದ 30 ಗಿಡಗಳು ಬಗ್ಗಿ ಹಾನಿಗೊಳಗಾಗಿರುವುದರಿಂದ ಅವುಗಳನ್ನು ತಕ್ಷಣವೇ ನೆಟ್ಟಗೆ ನಿಲ್ಲಿಸಿ ಸಂರಕ್ಷಣೆ ಮಾಡುವಂತೆ ಸಮಾಜ ಸೇವಕ ಎಂ. ಶಂಕರ್ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಸ್ತೆ ಬದಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನೆಡಲಾಗಿದ್ದ ಗಿಡಗಳು ಪರಿಸರ ಸಂರಕ್ಷಣೆಗೆ ಬಹಳ ಉಪಯುಕ್ತವಾಗಿದ್ದು, ಅವು ಹಾನಿಗೊಳಗಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಗಿಡಗಳಿಗೆ ಅಗತ್ಯವಾದ ಬೆಂಬಲ ಕಂಬಗಳನ್ನು ಅಳವಡಿಸಿ ಪುನಃ ಸರಿಪಡಿಸಿದರೆ ಅವು ಬದುಕುಳಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.























