Home ಜಿಲ್ಲೆ ಮೈಸೂರು ನಾಳೆ ಮಹಿಳೆಯರಿಗೆ ವಿಶೇಷ ಕಾರ್ಯಾಗಾರ

ನಾಳೆ ಮಹಿಳೆಯರಿಗೆ ವಿಶೇಷ ಕಾರ್ಯಾಗಾರ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.05:-
ಮಹಾನಗರ ಪಾಲಿಕೆ ವತಿಯಿಂದ ಮಹಿಳೆಯರು ಹಾಗೂ ವಿಕಲಚೇತನರಿಗೆ ಉದ್ಯೋಗ ಕಲ್ಪಿಸಿ ಆರ್ಥಿಕ ಮಟ್ಟ ಸುಧಾರಿಸಲು ಮಾ.6ರಂದು ಬೆಳಗ್ಗೆ 9.30ಕ್ಕೆ ರಂಗಚಾರ್ಲು ಪುರಭವನದಲ್ಲಿ ವಿಕಾಸ ಪಥದಲ್ಲಿ ವಿಶೇಷಚೇತನರ ಹಾಗೂ ಮಹಿಳೆಯರ ಹೆಜ್ಜೆ ಸೌರ ಬೆಂಬಲಿತ ಕಾರ್ಯಾಗಾರ ಹಾಗೂ ಜೀವನೋಪಾಯ ಪರಿಹಾರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ತಿಳಿಸಿದರು.


ಬುಧವಾರ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಛ ಮೈಸೂರು ರೋಡ್ ಶೋ ಹಾಗೂ ವಿಶೇಷಚೇತನರ ಹಾಗೂ ಮಹಿಳೆಯರ ಹೆಜ್ಜೆ ಸೌರ ಬೆಂಬಲಿತ ಕಾರ್ಯಾಗಾರದ ಪೆÇೀಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಶೇಷ ಚೇತನರಿಗಾಗಿ ಮಹಾನಗರ ಪಾಲಿಕೆಯಲ್ಲಿ ಶೇ.5ರಷ್ಟು ಅನುದಾನ ಮೀಸಲಿದ್ದು, ಅದರಲ್ಲಿ ಅವರಿಗೆ ಜೀವನೋಪಾಯ ಕಲ್ಪಿಸುವ ರೀತಿಯಲ್ಲಿ ತರಬೇತಿ ನೀಡಬೇಕು ಎಂದರು.
ಮಾ.6ರಂದು ಸೆಲ್ಕೋ ಫೌಂಡೇಶನ್ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕಾರ್ಯಾಗಾರದಲ್ಲಿ ಸೋಲರ್ ಆಧಾರಿತ ವ್ಯವಸಾಯ ಯಂತ್ರಗಳು, ಪಶುಸಂಗೋಪನಾ ಯಂತ್ರಗಳು, ಕಿರು ಉದ್ಯಮ ಯಂತ್ರ ಹಾಗೂ ಉತ್ಪನ್ನ ಯಂತ್ರಗಳನ್ನು ಬಳಸಿ ಸ್ವ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸಲು ಬೇಕಿರುವ ಕೌಶಲ್ಯ ತರಬೇತಿ ನೀಡಲಾಗುವುದು ಎಂದರು.
ತರಬೇತಿ ನೀಡಿದ ನಂತರ ಅವರಿಗೆ ಸ್ವ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಬೇಕಿರುವ ಸಾಲ ಹಾಗೂ ಸಹಾಯಧನ ಒದಗಿಸಿ, ನಂತರ ಅವರು ಜೀವನದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಬಗ್ಗೆ ನಿಗಾ ವಹಿಸಿ ಇತರರಿಗೆ ತಿಳಿಸಿ. ಇದರಿಂದ ಮಹಿಳೆಯರು ಹಾಗೂ ವಿಕಲಚೇತನರು ಹೆಚ್ಚಾಗಿ ಕೌಶಲ್ಯಾಧಾರಿತ ತರಬೇತಿ ಪಡೆಯಲು ಮುಂದಾಗಲಿ ಎಂದರು.


ಮಾ.8ರಂದು ಸ್ವಚ್ಛತಾ ರೋಡ್ ಶೋ:
ಮಹಾನಗರ ಪಾಲಿಕೆ ವತಿಯಿಂದ ಮಾ.8ರಂದು ಮೈಸೂರು ಅರಮನೆ ಆವರಣದಿಂದ ಓವಲ್ ಮೈದಾನದವರೆಗೆ ಸ್ವಚ್ಛ ಮೈಸೂರು ನನ್ನಿಂದ ಪ್ರಾರಂಭ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ರೋಡ್ ಶೋ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿಗಳನ್ನು ಸಹ ಆಹ್ವಾನಿಸಲಾಗುವುದು. ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಆಯೋಜಿಸಿ ಎಂದರು.


ರೋಡ್ ಶೋನಲ್ಲಿ ವಿಂಟೇಜ್ ಕಾರು:
ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ರೋಡ್ ಶೋನಲ್ಲಿ ವಿಟೇಂಜ್ ಕಾರ್, ಮಹಿಳಾ ದಿನಾಚರಣೆ ಮಾ.8ರಂದು ಇರುವ ಹಿನ್ನಲೆಯಲ್ಲಿ ಮಹಿಳೆಯರ ಬೈಕ್ ರ್ಯಾಲಿ, ಸೈಕಲ್ ರ್ಯಾಲಿ, ಮೌಂಟೆಡ್ ತಂಡದಿಂದ ಕುದುರೆಗಳು, ಟಾಂಗಾಗಳು ಇನ್ನಿತರೆ ತಂಡಗಳು ಭಾಗವಹಿಸುವ ರೀತಿ ಯೋಜಿಸಲಾಗುತ್ತಿದೆ. ರೋಡ್ ಶೋ ಕೊನೆಗೊಳ್ಳುವ ಓವಲ್ ಮೈದಾನದಲ್ಲಿ ಕಟ್ಟಡ ನಿರ್ಮಾಣ ತ್ಯಜ್ಯ ವಸ್ತುಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆ, ಇ.ವೇಸ್ಟ್, ಪ್ಲಾಸ್ಟಿಕ್, ಬಯೋ ಮೆಡಿಕಲ್ ವೇಸ್ಟ್‍ಗಳ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಆಯೋಜಿಸಿ ಸಾರ್ವಜನಿಕರಿಗೆ ಸ್ವಚ್ಛ ಮೈಸೂರು ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.


ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಉಪಾಯುಕ್ತೆ ವೀಣಾ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷರಾದ ಕೆ.ಬಿ.ಲಿಂಗರಾಜು, ಕ್ಲೀನ್ ಫೌಂಡೇಶನ್ ಮೈಸೂರ್‍ನ ನಿರ್ದೇಶಕಿ ಲೀಲಾ ವೆಂಕಟೇಶ್, ಸೆಲ್ಕೋ ಫೌಂಡೇಶನನ ಪ್ರಕಾಶ್ ಮೇಟಿ, ಪರಿಸರ ವಿಜ್ಞಾನ ಸಂಶೋಧಕ ಗೋಪಿ, ಕಿರಣ್.ಹೆಚ್, ಜಿಎಸ್‍ಎಸ್ ಪ್ರಾಜೆಕ್ಟ್ ಕ್ರೆಡೈನ ಶ್ರೀ ರಾಮ್ ಡಿ, ಶ್ರೀಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.