
ಪುತ್ತೂರು; ಕಸದಿಂದ ರಸ ತೆಗೆಯುವ ಚಿಂತನೆಗಳು ಇಂದು ಸಾಕಷ್ಟು ನಡೆಯುತ್ತಿವೆ. ಯಾರಿಗೂ ಬೇಡವಾದ ತ್ಯಾಜ್ಯಗಳನ್ನು ಬಳಿಸಿಕೊಂಡು ಅದನ್ನು ಉಪಯುಕ್ತವಾದ ನೆಲೆಯಲ್ಲಿ ಬಳಿಸಿಕೊಳ್ಳುವ ಯೋಚನೆಗಳು ಲಾಭದಾಯಕವಾಗಿಯೂ ಪರಿಣಾಮ ಬೀರುತ್ತಿವೆ. ಪುತ್ತೂರಿನ ಆರ್ಯಾಪು ಗಾಪಂ ಕೂಡಾ ಇದೀಗ ಇಂತಹ ಪ್ರಯೋಗಕ್ಕೆ ತನ್ನನ್ನು ತಾನು ತೆರೆದುಕೊಂಡಿದೆ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಗಾಜಿನ ಬಾಟಲುಗಳಿಂದ ‘ಮರಳು’ ತಯಾರಿಕೆ ಮುಂದಾಗಿದೆ. ಈ ಮರಳನ್ನು ಗಾರೆ ಕೆಲಸಕ್ಕೆ ಬಳಸುವ ಪ್ರಯೋಗವನ್ನೂ ಮಾಡಲು ಹೊರಟಿದೆ.

ದೇಶದಲ್ಲಿಯೇ ಕಸ ವಿಲೇವಾರಿ ಎಲ್ಲರ ತಲೆಕೆಡಿಸುತ್ತಿರುವ ದೊಡ್ಡ ಪಿಡುಗು. ಈ ಪೆಡಂಬೂತವನ್ನು ದೂರೀಕರಿಸಲು ಕಸ ನಿರ್ವಹಣೆಗಾಗಿಯೇ ಕೋಟ್ಯಾಂತರ ರೂ ವೆಚ್ಚ ಮಾಡಲಾಗುತ್ತಿರುವ ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇದರೊಂದಿಗೆ ಈ ಕಸ ವಿಲೇವಾರಿ ಮಾತ್ರವಲ್ಲ ಕಸ ವಿಂಗಡಣೆಯೂ ಸ್ಥಳೀಯ ಸರ್ಕಾರಗಳ ಹೆಗಲಿಗೆ ಬಿದ್ದಿದೆ. ಹಾಗಾಗಿ ಗ್ರಾಪಂಗಳು ಬಹುತೇಕ ಶ್ರಮವನ್ನು ಈ ಯೋಜನೆಯ ಜಾರಿಗಾಗಿ ವಿನಿಯೋಗಿಸುತ್ತಿವೆ. ಇಂತಹ ಸಂದರ್ಭದಲ್ಲಿಯೇ ಹೊಸ ಚಿಂತನೆಗಳು ಹುಟ್ಟಿಕೊಳ್ಳುತ್ತಿವೆ. ಪುತ್ತೂರಿನ ಆರ್ಯಾಪು ಗ್ರಾಪಂ ಇದೀಗ ಗಾಜಿನ ತ್ಯಾಜ್ಯದಿಂದ ಹೊಸ ಉತ್ಪನ್ನ ತಯಾರಿಗೆ ಮುಂದಾಗುವ ಮೂಲಕ ಜಿಲ್ಲೆಗೆ ಮಾದರಿಯಾಗುವತ್ತ ಹೆಜ್ಜೆ ಇಟ್ಟಿದೆ.
ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ಪೇಟೆ ಪಟ್ಟuಗಳಲ್ಲಿಯೂ ಎಲ್ಲೆಂದರಲ್ಲಿ ಎಸೆಯುವ ಗಾಜಿನ ಬಾಟಲಿಗಳನ್ನು ಈಗ ಬದುಕಿಗೆ ಪೂರಕವಾದ ಉತ್ಪನ್ನವಾಗಿ ಬದಲಾಯಿಸಲು ಹೊರಟಿರುವ ಆರ್ಯಾಪು ಗ್ರಾಪಂ ಗಾಜಿನ ತ್ಯಾಜ್ಯಕ್ಕೆ ಮೌಲ್ಯ ತಂದುಕೊಡಲು ಮುಂದಾಗಿದೆ. ಸ್ವಚ್ಛ ಭಾರತ್ ಯೋಜನೆಯಡಿ ಮನೆ ಮನೆಗಳಿಂದ ಕಸ ಸಂಗ್ರಹ ಮಾಡುವ ವೇಳೆ ಗ್ರಾಪಂಗಳಿಗೆ ಈ ಗಾಜಿನ ಹುಡಿ, ಬಾಟಲುಗಳು ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತವೆ. ಹಾಗೆಯೇ ಇಟ್ಟರೆ ಇದು ಅಪಾಯಕಾರಿ ವಸ್ತುಗಳು. ಉತ್ತಮ ಗಾಜಿನ ಬಾಟಲುಗಳನ್ನು ಗುಜರಿ ಅಂಗಡಿಗಳಿಗೆ ಕೊಡಬಹುದಾದರೂ ತುಂಡಾದ ಗಾಜುಗಳನ್ನು ಯಾರೂ ಖರೀದಿ ಮಾಡುವುದಿಲ್ಲ. ಇದಕ್ಕೊಂದು ಪರಿಹಾರ ಹುಡುಕಲು ಆರ್ಯಾಪು ಗ್ರಾಪಂ ಪಿಡಿಒ ನಾಗೇಶ್ ಮಾಡಿದ ಪ್ರಯತ್ನವೇ ಈ ಗಾಜಿನ ಮರಳು…
ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ಮಾಡಿದಾಗ ಗಾಜಿನ ಬಾಟಲಿಗಳನ್ನು ಹುಡಿ ಮಾಡುವ ಯಂತ್ರದ ಬಗ್ಗೆ ಅರಿತುಕೊಂಡ ಅಭಿವೃದ್ಧಿ ಅಧಿಕಾರಿ ನಾಗೇಶ್ ಕೆನರಾ ಬ್ಯಾಂಕಿನ ಸಹಕಾರದೊಂದಿಗೆ ಈ ಯಂತ್ರ ಖರೀದಿ ಮಾಡುತ್ತಾರೆ. ತಮಿಳುನಾಡಿನಿಂದ ತರಿಸಲಾದ ರೂ.೪.೨೫ ಲಕ್ಷ ವೆಚ್ಚದ ಈ ಯಂತ್ರ ಈಗ ಬಾಟಲಿಗಳನ್ನು ಮರಳನ್ನಾಗಿ ಪರಿವರ್ತಿಸುವ ಕಾಯಕ ನಡೆಸುತ್ತಿದೆ.
ಪ್ರಾರಂಭಿಕ ಹಂತದಲ್ಲಿರುವ ಆರ್ಯಾಪು ಗಾಜಿನ ಮರಳು ತಯಾರಿಕಾ ಘಟಕ ಭವಿಷ್ಯದಲ್ಲಿ ಪುತ್ತೂರು ತಾಲೂಕಿನ ೨೨ ಗ್ರಾಪಂಗಳು ಮಾತ್ರವಲ್ಲ ಕಡಬ ಸುಳ್ಯ ತಾಲೂಕುಗಳ ಗಾಜಿನ ತ್ಯಾಜ್ಯಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ಬರಲಿದೆ. ಈಗಾಗಲೇ ಈ ಗಾಜಿನ ಮರಳಿಗೆ ಸಾಕಷ್ಟು ಬೇಡಿಕೆಗಳು ಬಂದಿವೆ. ಹಾಗಾಗಿ ಪುತ್ತೂರು ಉಪವಿಭಾಗದ ಗ್ರಾಪಂಗಳು ಇನ್ನು ಮುಂದೆ ಗಾಜಿನ ಬಾಟಲಿಗಳ ತ್ಯಾಜ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.
ಗಾಜಿನ ಬಾಟಲಿಗಳ ಮೂಲವೂ ಮರಳು. ಈಗ ಅದೇ ಉತ್ಪನ್ನವನ್ನು ಮತ್ತೆ ಮರಳಾಗಿಸುವ ಯೋಜನೆ ಇಲ್ಲಿ ಸಾಕಾರಗೊಳ್ಳುತ್ತಿದೆ. ಆದರೆ ಬಾಟಲಿಗಳ ಬಣ್ಣದಲ್ಲಿಯೇ ಈ ಮರಳು ದೊರೆಯುತ್ತದೆ. ವಿವಿಧ ಬಣ್ಣಗಳ ಗಾಜುಗಳ ಮರಳು ಆಯಾಯ ಗಾಜಿನ ಬಣ್ಣದಂತೆ ಮರಳಿನ ರೂಪ ಪಡೆದುಕೊಳ್ಳುತ್ತಿವೆ. ಈ ಮರಳು ಗಾರೆ ಕೆಲಸದ ಪ್ರಯೋಗದಲ್ಲಿ ಯಶಸ್ಸು ಕಂಡರೆ ಪ್ರಕೃತಿದತ್ತ ಮರಳಿಗೆ ಪರ್ಯಾಯವಾಗಲಿದೆ. ಗಾರೆ ಕೆಲಸಕ್ಕೆ ಈ ಮರಳು ಬಳಿಸಿಕೊಳ್ಳಲು ಸಾಧ್ಯವಾಗಿಸುವ ಪ್ರಯೋಗವನ್ನು ಆರ್ಯಾಪು ಗ್ರಾಪಂ ನಡೆಸಲಿದೆ. ನೈಸರ್ಗಿಕ ಮರಳಿನ ಜತೆಗೆ ಈ ಗಾಜಿನ ಮರಳನ್ನು ಮಿಶ್ರಣ ಮಾಡಿ ಉಪಯೋಗಿಸಲು ಸಾಧ್ಯವಾದರೂ ಇದೊಂದು ಉತ್ತಮ ಯೋಜನೆಯಾಗಲಿದೆ. ಆರ್ಯಾಪು ಗ್ರಾಪಂನ ಈ ಗಾಜಿನ ಮರಳನ್ನು ಗಾರೆಗೆ ಬಳಸುವ ಯೋಜನೆ ಯಶಸ್ವಿ ಕಂಡರೆ ಗ್ರಾಪಂ ಆದಾಯಕ್ಕೂ ದೊಡ್ಡ ಪ್ರಮಾಣದ ಕೊಡುಗೆಯಾಗಲಿದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.
ರಾಜ್ಯಕ್ಕೂ ಮಾದರಿ
ಬಾಟಲಿ ವಿಲೇವಾರಿಗೆ ದೊಡ್ಡ ಸಮಸ್ಯೆ ಆಗುತ್ತಿತ್ತು. ರಸ್ತೆ ಬದಿಯಲ್ಲಿ ಪ್ರತೀ ದಿನವೂ ಸಿಗುತ್ತದೆ. ಇದೀಗ ಈ ಸಮಸ್ಯೆಗೊಂದು ಪರಿಹಾರ ಹುಡುಕುವ ನಿಟ್ಟಿನಲ್ಲಿ ಆರ್ಯಾಪಿನಲ್ಲಿ ಯಂತ್ರವನ್ನು ಬಳಿಸಕೊಂಡು ಬಾಟಲಿಯನ್ನು ಮರಳನ್ನಾಗಿಸುವ ಕೆಲಸ ಆರಂಭವಾಗಿದೆ. ಇದು ರಾಜ್ಯಕ್ಕೂ ಮಾದರಿಯಾದ ಕೆಲಸವಾಗಿದೆ. ಇದೊಂದು ಹೊಸ ಆವಿಷ್ಕಾರವಾಗಿದೆ. ಪುತ್ತೂರಿನಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ವಿನೂತನ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಬರುತ್ತಿದ್ದೇವೆ. ಇದರಲ್ಲಿ ಆರ್ಯಾಪಿನಲ್ಲಿ ಆರಂಭಿಸಲಾದ ಗಾಜಿನ ಬಾಟಲಿನಿಂದ ಮರಳು ತಯಾರಿಕೆ ನಡೆಸುವುದೂ ಒಂದಾಗಿದೆ- ನವೀನ್ ಕುಮಾರ್ ಭಂಡಾರಿ ತಾಪಂ ಕಾರ್ಯನಿರ್ವಹಣಾಧಿಕಾರಿ ಪುತ್ತೂರು.
ಮೇಘಾ ಪಾಲೆತ್ತಾಡಿ
























