
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಜು.08 ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮಳೆರಾಯನನ್ನು ಒಲಿಸಿಕೊಳ್ಳುವ ಉದ್ದೇಶದಿಂದ ತಾಲೂಕಿನ ಗದ್ದಿಕೆರೆ ಗ್ರಾಮದಲ್ಲಿ ಸಂಪ್ರದಾಯಬದ್ಧ ಗುರ್ಜಿ ಹರಕೆ ಸೇವೆ ಭಕ್ತಿಭಾವದಿಂದ ನೆರವೇರಿತು.
ಗ್ರಾಮದ ಬಾಲಕರಾದ ಉಜ್ಜನಿ ರವಿ ಹಾಗೂ ಉಜ್ಜನಿ ಗುರು ಅವರು ಐದು ದಿನಗಳ ಕಾಲ ಗುರ್ಜಿ ಹೊತ್ತು ಗದ್ದಿಕೆರೆ ಹಾಗೂ ಹೊಸಪ್ಲಾಟ್ ಪ್ರದೇಶದ ಮನೆಮನೆಗೆ ತೆರಳಿ, “ಗುರ್ಜಿ ಗುರ್ಜಿ ಎಲ್ಲಾಡಿ ಬಂದಿ, ಹಳ್ಳಕೊಳ್ಳ ಸುತ್ತಾಡಿ ಬಂದೆ…” ಎಂಬ ಸಾಂಪ್ರದಾಯಿಕ ಹಾಡನ್ನು ಹಾಡುತ್ತ ಹರಕೆ ಸಲ್ಲಿಸಿದರು. ಈ ವಿಶಿಷ್ಟ ಆಚರಣೆ ಗ್ರಾಮಸ್ಥರ ಗಮನ ಸೆಳೆದು ಮಳೆಗಾಗಿ ಸಾಮೂಹಿಕ ಪ್ರಾರ್ಥನೆಗೆ ಸಾಕ್ಷಿಯಾಯಿತು.
ಐದು ದಿನಗಳ ಸೇವೆಯ ಬಳಿಕ ಗ್ರಾಮದ ಹೊರವಲಯದಲ್ಲಿರುವ ಹುಲಿಕಂಟಿ ಮಾರುತಿ ಗುಡ್ಡದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಪಿ. ಸಲೀಂ ಸಾಬ್, ಬಸಾಪುರ ಗೋಣೆಪ್ಪ, ಬೊಮ್ಮನಹಳ್ಳಿ ಸಾವಿತ್ರಮ್ಮ, ಪಿಂಜಾರ್ ಅಭಿದವ್ವ, ಆನಂದಳ್ಳಿ ಬಸಮ್ಮ, ಬಸಾಪುರ ಸಾವಿತ್ರಮ್ಮ, ಬಸಾಪುರ ಪದ್ದಮ್ಮ, ಶಿವರೆಡ್ಡಿ ಅಕ್ಕಮಹಾದೇವಿ, ಭರೆಡ್ಡಿ ವೀಣಾ, ಮಾಬುನಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.



























