Home ಜಿಲ್ಲೆ ಮಂಗಳೂರು ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ ವಿಳಂಬ ಸಲ್ಲದು: ಶಾಸಕ ಕಾಮತ್

ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ ವಿಳಂಬ ಸಲ್ಲದು: ಶಾಸಕ ಕಾಮತ್

ಮಂಗಳೂರು: ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸಮಾಧಿ ಬಳಿ ಪ್ರವಾಸಿ ತಾಣ, ಸಮಗ್ರ ಅಭಿವೃದ್ಧಿ ಕಾಮಗಾರಿ ಅನಗತ್ಯವಾಗಿ ವಿಳಂಬವಾಗುತ್ತಿದ್ದು, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಹಾಗೂ ಕಂದಾಯ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ದಲಿತೋದ್ಧಾರಕ ಕುದ್ಮುಲ್ ರಂಗರಾವ್ ಅವರ ಸಮಾಧಿ ಅಭಿವೃದ್ಧಿಗಾಗಿ ೨೦೨೨ರ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ -೧ ಮೂಲಕ ೩ ಕೋಟಿ ರು. ಅನುದಾನ ಮಂಜೂರುಗೊಳಿಸಲಾಗಿತ್ತು. ನಂತರ ಅದರ ಗುದ್ದಲಿ ಪೂಜೆಯನ್ನೂ ನಾವು ನಡೆಸಿದ್ದೇವೆ. ಆದರೆ ಈವರೆಗೆ ಒಂದಿಲ್ಲೊಂದು ಸಮಸ್ಯೆ ಹೇಳಿಕೊಂಡು, ಎಂದೋ ಪೂರ್ಣಗೊಳ್ಳಬೇಕಿದ್ದ ಕಾರ್ಯವನ್ನು ನಿಲ್ಲಿಸಿರುವುದು ಬೇಸರದ ಸಂಗತಿ. ದಲಿತರ ಕುಂದುಕೊರತೆ ಸಭೆಗಳಲ್ಲೂ ಸಮುದಾಯದ ಮುಖಂಡರು ಪ್ರಸ್ತಾಪಿಸಿದ್ದು, ಇದೀಗ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗುತ್ತಿದ್ದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಯಲು ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚನೆ ನೀಡಿದರು.
ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಉಪ ಆಯುಕ್ತ ನರೇಶ್ ಶೆಣೈ, ತಹಸೀಲ್ದಾರ್ ರಮೇಶ್ ಬಾಬು, ಅರಣ್ಯ ಇಲಾಖೆಯ ರಾಜೇಶ್ ಬಳಿಗಾರ್, ಸಮಾಜ ಕಲ್ಯಾಣ ಇಲಾಖೆಯ ಸುರೇಶ್ ಅಡಿಗ, ಅಧಿಕಾರಿಗಳಾದ ರಾಜೇಶ್, ಪುನೀತ್, ಭವ್ಯ, ಮಾಲಿನಿ, ಶಿವುಕುಮಾರ್, ನಿಕಟಪೂರ್ವ ಪಾಲಿಕೆ ಸದಸ್ಯ ಶೈಲೇಶ್ ಶೆಟ್ಟಿ, ದಲಿತ ಮುಖಂಡರಾದ ರಘುವೀರ್ ಬಾಬುಗುಡ್ಡೆ, ಶಿವಪ್ಪ ನಂತೂರು, ಹೃದಯನಾಥ್, ಸಂದೀಪ್ ಬೋಳೂರು, ಕಿರಣ್ ಕೊಡಿಯಾಲ್ ಬೈಲ್, ಪ್ರಕಾಶ್ ಕೋಡಿಕಲ್, ಉಮೇಶ್ ಕುಮಾರ್, ದೇವೇಂದ್ರ, ಪ್ರಭಾಕರ್ ಮತ್ತಿತರರು ಇದ್ದರು.