
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,7- ಎಐಟಿಯುಸಿಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ ಮುಂದೆ ಇಂದು ಕಟ್ಟಡ ಕಾರ್ಮಿಕರ ಆರೋಗ್ಯ ಪಿಂಚಣಿ ಮಕ್ಕಳ ಶಿಕ್ಷಣಕ್ಕೆ ಹಣ ಬಿಡುಗಡೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ” ಕರ್ನಾಟಕ ರಾಜ್ಯದ ಲಕ್ಷಾಂತರ ಕಟ್ಟಡ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ದುಡಿಯುವ ಅವರ ಬೆವರಿನ ದುಡಿಮೆಯಿಂದ ಸಂಗ್ರಹವಾಗಿರುವ ನಿಧಿಯನ್ನು ಕಲ್ಯಾಣಮಂಡಳಿಯ ಘೋಷಿತ ಹಕ್ಕುಗಳ ಜಾರಿಗಾಗಿ ಬಳಸುವ ಬದಲು, ಭ್ರಷ್ಟಾಚಾರಕ್ಕೆ ಇಂಬು ಕೊಡುವ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಅತ್ಯಂತ ಖಂಡನೀಯ ಎಂದರು.
ಆರೋಗ್ಯ, ಪಿಂಚಣಿ, ಮಕ್ಕಳ ಶಿಕ್ಷಣ ದಂತಹ ಬದುಕಿನ ವಿಷಯಗಳಿಗೆ ಯೋಜನೆಗಳನ್ನು ಜಾರಿಮಾಡುವುದರ ಬದಲು ಹಣ ನುಂಗುವ ವಿವಿಧ ಹೆಸರಿನ ಕಿಟ್ ನೀಡಿಕೆ – ವಸ್ತುಗಳ ಖರೀದಿ ಮತ್ತು ವಿತರಣೆಯಲ್ಲಿಯೇ ಕಲ್ಯಾಣ ಮಂಡಳಿಯು ತೊಡಗಿದೆಂದು ಆಪಾದಿಸಿದರು.
ಕಟ್ಟಡ ಕಾರ್ಮಿಕರ ನೈಜ ಬೇಡಿಕೆಗಳಾದ, ವಿವಿಧ ಹೆಸರಿನ ಕಿಟ್ಗಳ ವಿತರಣೆಯನ್ನು ತಕ್ಷಣವೇ ನಿಲ್ಲಿಸಿ, ಅದರ ಸಂಪೂರ್ಣ ಹಣವನ್ನು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಬೇಕು. 2 ವರ್ಷ ಬಾಕಿಯಿರುವ ಶೈಕ್ಷಣಿಕ ಧನಸಹಾಯವನ್ನು ಹಳೆಯ ದರದಲ್ಲಿ ಕೂಡಲೇ ಪಾವತಿಸಬೇಕು. ಶಾಲಾ ಕಿಟ್ ಗಳಿಗೆ ಮೀಸಲಿಟ್ಟಿರುವ ₹115 ಕೋಟಿ ಹಣವನ್ನು ಮಕ್ಕಳಿಗೆ ಶೈಕ್ಷಣಿಕ ಧನಸಹಾಯವಾಗಿ ವಿತರಿಸಬೇಕು.ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರಿಗೆ ಗುಣಮಟ್ಟದ ನಗದುರಹಿತ ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯವನ್ನು ಖಾತರಿಪಡಿಸಬೇಕು. 60 ವರ್ಷ ತುಂಬಿದ ನಂತರ 6 ತಿಂಗಳೊಳಗೆ ಪಿಂಚಣಿಗೆ ಅರ್ಜಿ ಸಲ್ಲಿಸಬೇಕೆಂಬ ಅನ್ಯಾಯದ ನಿಯಮವನ್ನು ತಕ್ಷಣವೇ ರದ್ದುಪಡಿಸಿ, 60 ವರ್ಷ ತುಂಬಿದ ಪ್ರತಿಯೊಬ್ಬ ನೋಂದಾಯಿತ ಕಟ್ಟಡ ಕಾರ್ಮಿಕರಿಗೂ ಯಾವುದೇ ತಾರತಮ್ಯವಿಲ್ಲದೆ ಪಿಂಚಣಿ ಮಂಜೂರು ಮಾಡಬೇಕು ಎಂದರು.
ಸಂಘಟನೆಯ ಮುಖಂಡ ಸುರೇಶ್, ಎಲ್ಲಾ ಹಕ್ಕುಗಳನ್ನು ಪಡೆಯಲು ದೊಡ್ಡ ಸಂಖ್ಯೆಯಲ್ಲಿರುವ ಸಮಸ್ತ ಕಟ್ಟಡ ಕಾರ್ಮಿಕರು ತಮ್ಮ ಒಗ್ಗಟ್ಟನ್ನು ಬಲಪಡಿಸಿಕೊಂಡು ರಾಜಕೀಯ ರಹಿತ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಮುಖoಡರಾದ ಜಯರಾಜ್, ನೀಲಪ್ಪ, ಮೊಹಮದ್ ಎಜಸ್, ಮಲ್ಲಿಕಾರ್ಜುನ್, ಪಂಪ, ಶೇಷಾವಲಿ …… ಮುಂತಾದವರು ಭಾಗವಹಿಸಿದ್ದರು.



























